
ಮಂಡ್ಯ (ಮಾ.11): ಚುನಾವಣೆಗಳು ಬಂದಾಗ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳು ಭರವಸೆಗಳ ಮೂಲಕ ತಪ್ಪುದಾರಿಗೆ ಎಳೆಯುವ ಪ್ರಯತ್ನ ನಡೆಸುವುದು ಸಹಜ. ಆದರೆ, ಬಿಜೆಪಿಯು ಜನರನ್ನು ತಪ್ಪು ದಾರಿಗೆಳೆಯುವುದನ್ನೇ ಅಜೆಂಡಾ ಮಾಡಿಕೊಂಡಿದೆ ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ನಗರದ ಮಂಡ್ಯ ವಿವಿ ಆವರಣದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಪಕ್ಷವು ಬಹಳ ಬುದ್ಧಿವಂತಿಕೆಯಿಂದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಳೆದ ೧೦ ವರ್ಷಗಳಿಂದಲೂ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಟೀಕಿಸಿದರು.
ಕರ್ನಾಟಕದ ಜನರ ಬಗ್ಗೆ ಕೇಂದ್ರ ಸರ್ಕಾರ ಬಹಳ ಉದಾಸೀನ ಧೋರಣೆ ತಳೆದಿದೆ. ಆರು ತಿಂಗಳಿಂದ ಬರ ಪರಿಹಾರಕ್ಕೆ ಮನವಿ ಮಾಡುತ್ತಿದ್ದರೂ ಹಣ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯಡಿ ಕೆಲಸ ಮಾಡಿರುವವರಿಗೆ ನಾಲ್ಕು ತಿಂಗಳಿನಿಂದ ಹಣ ಕೊಟ್ಟಿಲ್ಲ. ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದರೂ, ಅಮಿತ್ ಶಾ ನೇತೃತ್ವದ ಸಮಿತಿ ಒಂದೇ ಒಂದು ಸಭೆ ಮಾಡಿಲ್ಲ. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಬೇಕಿದೆ. ಈ ಚುನಾವಣೆ ವೇಳೆ ಬಿಜೆಪಿಯನ್ನು ನಿರ್ಲಕ್ಷ್ಯ ಮಾಡಬೇಕಿದೆ. ಕಾವೇರಿ ವಿಚಾರದಲ್ಲಿ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಜೂನ್‌ವರೆಗೂ ರೈತರನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಸರ್ಕಾರದ ಮೇಲಿದೆ ಎಂದರು.
ಬಿಜೆಪಿ ಬಡವರ ವಿರೋಧಿ, ಹಸಿದವರ ಅನ್ನ ಕಸಿದ ಪಕ್ಷ: ಸಿಎಂ ಸಿದ್ದರಾಮಯ್ಯ
ಕೇಂದ್ರದ ಜನ ವಿರೋಧಿ, ರೈತ ವಿರೋಧಿ ಧೋರಣೆಯನ್ನು ಧಿಕ್ಕರಿಸುವ ಕಾಲವೂ ಬಂದಿದೆ. ಈಗ ಎದುರಾಗಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ಕೊಡಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಮತದಾರರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಗೆಲ್ಲಿಸಬೇಕೆಂದು ಕೋರಿದರು. ೨೦೧೮ರಲ್ಲಿ ರಾಜ್ಯದ ಮತ್ತು ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ನಾಯಕರೇ ದೇವೇಗೌಡರ ಮನೆಗೆ ಹೋಗಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆ ನೀಡಿ, ಅಧಿಕಾರಕ್ಕೆ ಕೂರಿಸಲಾಯಿತು. ಆದರೀಗ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದ ಬಿಜೆಪಿ ಜತೆ ಸೇರಿ ಜೆಡಿಎಸ್ ಸೇರಿದೆ. ಇದಕ್ಕೆ ಏನು ಹೇಳೋದು ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.