ಜನಸ್ಪಂದನ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮ ಆಗಿರುವ ಕಾರಣ ಯಾವುದೇ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡು ಕಾರ್ಯಕ್ರಮ ಮಾಡುತ್ತಿಲ್ಲ: ಎಂಟಿಬಿ ನಾಗರಾಜ್
ಹೊಸಕೋಟೆ(ಸೆ.10): ಬಿಜೆಪಿ ಪಕ್ಷದಿಂದ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮ ಎಲ್ಲಾ ಶಾಸಕ, ಸಚಿವರ ವೈಯಕ್ತಿಕ ಹಣದಿಂದಲೇ ಹೊರತು ಸರ್ಕಾರದ ಹಣದಿಂದ ಅಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಇಲಾಖಾ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು. ತಾಲೂಕಿನ ವಾಗಟ ಗ್ರಾಪಂ ವ್ಯಾಪ್ತಿಯ ಕಾಚರಕನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮ ಬಿಜೆಪಿ ಪಕ್ಷದ ಕಾರ್ಯಕ್ರಮ ಆಗಿರುವ ಕಾರಣ ಯಾವುದೇ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡು ಕಾರ್ಯಕ್ರಮ ಮಾಡುತ್ತಿಲ್ಲ. ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಆಕ್ಷೇಪಣೆ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.
ಜನಸ್ಪಂದನ ಕಾರ್ಯಕ್ರಮಕ್ಕೆ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಒಟ್ಟು 5 ಸಾವಿರ ಬಸ್‌ಗಳಲ್ಲಿ ಎರಡೂವರೆ ಲಕ್ಷ ಕಾರ್ಯಕತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಪಕ್ಷ ಸಂಘಟನೆ ಮಾಡುವ ಬಗ್ಗೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲಾಗುವುದು. ಅಲ್ಲದೆ ಈ ಕಾರ್ಯಕ್ರಮ 2023ನೇ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.
undefined
ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ, ರಾಜ್ಯ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ!
ಒತ್ತುವರಿ ತೆರವು ಶೀಘ್ರ :
40 ವರ್ಷಗಳ ಬಳಿಕ ಕಾಚರಕನಹಳ್ಳಿ ಕೆರೆ ತುಂಬಿ ಕೊಡಿ ಹರಿಯುತ್ತಿರುವ ಹಿನ್ನೆಲೆ ಬಾಗಿನ ಅರ್ಪಣೆ ಮಾಡಲಾಗಿದೆ. ಗ್ರಾಮದ ಕೆರೆ ಜಾಗ ಹಾಗೂ ಸ್ಮಶಾನ ಒತ್ತುವರಿ ಆಗಿರುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದು ತ್ವರಿತವಾಗಿ ತಹಸೀಲ್ದಾರ್ ಅವರ ಮೂಲಕ ಸರ್ವೆ ಕಾರ್ಯ ಮಾಡಿಸಿ ತೆರವು ಮಾಡಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಶೀಘ್ರದಲ್ಲಿ ಹೊಸ ಕೊಳವೆ ಬಾವಿ:
ಗ್ರಾಮಕ್ಕೆ ನೀರೊದಗಿಸುವ ದೃಷ್ಟಿಯಿಂದ ಕೆರೆಯಂಗಳದಲ್ಲಿ ಕೊರೆಸಲಾಗಿದ್ದ ಕೊಳವೆಬಾವಿ ನೀರಿನಲ್ಲಿ ಮುಳುಗಿರುವ ಪರಿಣಾಮ ನೀರಿನ ಸಮಸ್ಯೆ ನಿವಾರಣೆಗೆ ನಾಲ್ಕು ದಿನಗಳಲ್ಲಿ ವೈಯಕ್ತಿಕ ನೆರವಿನಡಿ ನೂತನ ಕೊಳವೆ ಬಾವಿ ಕೊರೆಸಿಕೊಡಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದರು.
ಯುವ ಮುಖಂಡ ಕೋಡಿಹಳ್ಳಿ ಜನಾರ್ದನ್, ಗ್ರಾಮ ಮುಖಂಡರಾದ ವೆಂಕಟೇಶ್ ಮೂರ್ತಿ, ಸುರೇಶ್, ಮಂಜುನಾಥ್, ಕೃಷ್ಣಮೂರ್ತಿ, ಮಂಜುನಾಥ್, ಮುನಿಯಪ್ಪ, ರಾಮಚಂದ್ರಪ್ಪ, ರಾಮಯ್ಯ, ಸಂಜೀವಪ್ಪ, ರಮೇಶ್ ಇತರರು ಹಾಜರಿದ್ದರು.