ಜಿದ್ದಾಜಿದ್ದಿನ ಸ್ಪರ್ಧೆಗೆ ಹೆಸರಾಗಿರುವ ಹಳ್ಳಿ ಫೈಟ್ ಅತ್ಯವಾಗಿದ್ದು, ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಮೇಲೆ ಚಿತ್ತ ನೆಟ್ಟಿದೆ. ಇನ್ನು ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ನೂತನ ಸದಸ್ಯರುಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರು, (ಡಿ.31): ರಾಜ್ಯದಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಹಣಾಹಣಿಯ ಫಲಿತಾಂಶ ಬುಧವಾರ ಪ್ರಕಟಣೆಯೊಂದಿಗೆ ಅಂತ್ಯಗೊಂಡಿದ್ದು, ಈಗ ಎಲ್ಲರ ಕಣ್ಣು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಮೇಲೆ ನೆಟ್ಟಿದೆ.
ಭಾರಿ ಪೈಪೋಟಿ ಮೂಲಕ ಸದಸ್ಯರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಈಗೇನಿದ್ದರೂ ಅಧ್ಯಕ್ಷಗಿರಿಗಾಗಿ ತೆರೆಯ ಹಿಂದೆ ಪ್ರಯತ್ನ ಆರಂಭಿಸಲಿದ್ದಾರೆ. ಇನ್ನು ಈ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಮೀಸಲಾತಿಗೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
undefined
'ಲಕ್ಷ್ಮಿ ಕಟಾಕ್ಷ' ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಬಣಕ್ಕೆ ಭರ್ಜರಿ ಜಯ
ತಿಂಗಳ ಒಳಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ
ತಿಂಗಳ ಒಳಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಅವರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಿಕೆ ಕುರಿತು ತರಬೇತಿ ನೀಡಲಾಗುವುದು. ಗ್ರಾಮ ಪಂಚಾಯತ್ ವ್ಯವಸ್ಥೆ ಬಲಪಡಿಸಲು ನಿರಂತರ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು.
ನೂತನ ಸದಸ್ಯರಿಗೆ ತರಬೇತಿ
ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ರಾಜ್ಯದ 92,131 ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ಜನವರಿ 19ರಿಂದ ಮಾರ್ಚ್ 26ರವರೆಗೆ ತಾಲ್ಲೂಕು ಹಂತದಲ್ಲಿ ತರಬೇತಿ ನೀಡಲಾಗುವುದು. ರಾಜ್ಯದ 176 ತಾಲ್ಲೂಕುಗಳ 285 ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ. ಕೆಲವು ಕಡೆ ಎರಡು ಕೇಂದ್ರಗಳನ್ನು ಗುರುತಿಸಲಾಗಿದೆ. 900 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ. 40 ಸದಸ್ಯರಿಗೆ ಒಂದು ತಂಡ ರಚಿಸಲಾಗಿದೆ. ಪ್ರತಿ ತಂಡಕ್ಕೆ 5 ದಿನಗಳು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ತರಬೇತಿ ನಡೆಯಲಿದೆ. 15 ವಿಷಯಾಧಾರಿತ ಅಧಿವೇಶನಗಳು ಮತ್ತು ಕೌಶಲ ಮಾಹಿತಿ ನೀಡಲಾಗುವುದು. ಸದಸ್ಯರಿಗೆ ಪ್ರಯಾಣ ಭತ್ಯೆ, ಭಾಗವಹಿಸುವಿಕೆ ಭತ್ಯೆ ನೀಡಲಾಗುವುದು. ತರಬೇತಿಗೆ ಅಂದಾಜು 27.16 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.