ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೈ ಬಿಡಬೇಕು ಎಂಬ ಸಾಮಾಜಿಕ ಜಾಲತಾಣದಲ್ಲಿ ಹೋರಾಟದ ವಿಷಯ ಅದು ಪಕ್ಷದ ಆಂತರಿಕ ವಿಚಾರ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ತುಮಕೂರು (ಆ.25): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೈ ಬಿಡಬೇಕು ಎಂಬ ಸಾಮಾಜಿಕ ಜಾಲತಾಣದಲ್ಲಿ ಹೋರಾಟದ ವಿಷಯ ಅದು ಪಕ್ಷದ ಆಂತರಿಕ ವಿಚಾರ ಎಂದು ಸಚಿವ ಗೋಪಾಲಯ್ಯ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷರ ಬದಲಾವಣೆಗೆ ಮೂರು ವರ್ಷ ಆದ ಮೇಲೆ ಪಕ್ಷದ ನಿಯಮವಿದೆ. ಅದಕ್ಕೆ ಕೇಂದ್ರದ ವರಿಷ್ಠರು ಇದ್ದಾರೆ. ತೀರ್ಮಾನ ಮಾಡುತ್ತಾರೆ. ನಾವು ಜಿಲ್ಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರದಿಂದ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲಾ ಬದ್ದರಾಗಿರುತ್ತೇವೆ. ಇದು ಪಕ್ಷದ ವರಿಷ್ಠರಿಗೆ ಸಂಬಂಧಪಟ್ಟ ವಿಚಾರ. ನನಗಾಗಲಿ, ಮಾಜಿ ಶಾಸಕ ಸುರೇಶ್‌ಗೌಡರಿಗಾಗಲೀ ಸಂಬಂಧಪಟ್ಟ ವಿಚಾರ ಅಲ್ಲ ಎಂದರು.
ಆನ್‌ಲೈನ್‌ನಲ್ಲಿ ಮದ್ಯ ಮಾರಾಟ: ನಾನು ಸಚಿವನಾದ ಮೇಲೆ ಎಲ್ಲಿ ಏನೇ ವ್ಯಾಪಾರ ಆದರೂ ಸ್ಥಳೀಯರಿಗೆ ಅನುಕೂಲ ಆಗಬೇಕು. ಆನ್‌ಲೈನ್‌ನಿಂದ ಯಾರೋ ಅಂತರರಾಷ್ಟ್ರೀಯ ಮಾರುಕಟ್ಟೆಯವನು ಬಂದು, 10, 12 ಸಾವಿರ ಕುಟುಂಬಗಳಿಗೆ ಅನ್ಯಾಯ ಆಗೋದು ಬೇಡ. ಇದರಿಂದ 3 ಲಕ್ಷ ಕುಟುಂಬಗಳು ಜೀವನ ಮಾಡುತ್ತಿವೆ. ಅದರ ಪ್ರಸ್ತಾವನೆ ಸದ್ಯಕ್ಕೆ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆ ಅಪ್ರಸ್ತುತ. ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲೆ ಚುನಾವಣೆಯನ್ನ ಎದುರಿಸುತ್ತೇವೆ. ಕ್ಯಾಬಿನೆಟ್ ವಿಸ್ತರಣೆ, ಖಾತೆ ಬದಲಾವಣೆ ವರಿಷ್ಠ ಮಂಡಳಿಗೆ ಬಿಟ್ಟವಿಚಾರ ಎಂದು ಗೋಪಾಲಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಳೆ ಹಾನಿ ಕಾಮಗಾರಿಗೆ ತುರ್ತು ಅನುದಾನ: ಸಚಿವ ಗೋವಿಂದ ಕಾರಜೋಳ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಪೋಟೋ ಇಡುತ್ತೇವೆ: ಗಣೇಶೋತ್ಸವದಲ್ಲಿ ಸಾರ್ವರ್ಕರ್ ಫೋಟೋ ಇಟ್ಟರೆ ತಪ್ಪೇನು. ನಾನು ನಮ್ಮ ಕ್ಷೇತ್ರದಲ್ಲಿಯೂ ಇಡುತ್ತೇನೆ. ನಾನೊಬ್ಬ ದೇಶ ಭಕ್ತ. ಸಾವರ್ಕರ್ ಪೋಟೋ ಇಡುತ್ತೇನೆ ತಪ್ಪೇನು ಎಂದು ಪ್ರಶ್ನಿಸಿದ ಗೋಪಾಲಯ್ಯ, ಪ್ರತಿಯೊಬ್ಬ ದೇಶ ಭಕ್ತನು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಪೋಟೋ ಇಡಬೇಕು. ಗಾಂಧೀಜಿ, ಅಂಬೇಡ್ಕರ್‌ರ ಪೋಟೋ ಇಡಬೇಕು ತಪ್ಪೇನಿಲ್ಲ. ಇಡೋದು, ಬಿಡೋದು ಅವರವರ ಭಾವನೆಗೆ ಬಿಟ್ಟಂತಹ ವಿಚಾರ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಪೋಟೋ ಇಡುತ್ತೇವೆ ಎಂದರು.
ಕಾಂಗ್ರೆಸ್‌ಗೆ ಪ್ರತಿಭಟನೆ ಮಾಡುವುದಕ್ಕೆ ಬಿಟ್ಟರೆ ಹೆಣ ಬೀಳುತ್ತೆ ಎಂಬ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪ್ರಕ್ಷುಬ್ದ ವಾತಾವರಣ ಇದೆ. ಕರ್ನಾಟಕ ಒಂದು ಶಾಂತಿ ಪ್ರಿಯ ರಾಜ್ಯ. ಹಾಗಾಗಬಾರದು ಎಂಬ ಅರ್ಥದಲ್ಲಿ ಅವರು ಹೇಳಿರಬಹುದು. ಆ ರೀತಿ ಆಗೋದಿಲ್ಲ. ನಾವೆಲ್ಲಾ ಶಾಂತಿ ಪ್ರಿಯರು. ಕರ್ನಾಟಕದ ಜನ ಗಡಿ, ನೀರಿನ ವಿಷಯದಲ್ಲಿ ರೊಚ್ಚಿಗೆದ್ದು, ಯಾವ ಮಟ್ಟಕ್ಕೆ ಹೋಗಿದ್ದಾರೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ರಾಜ್ಯದ ವಿಷಯ ಬಂದಾಗ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಷ್ಟೇ ಎಂದರು.
ಹಾಸನ, ಮಂಡ್ಯದ ಜೊತೆಗೆ ತುಮಕೂರು ಗ್ರಾಮಾಂತರ ಕ್ಷೇತ್ರವನ್ನ ಮುಂದಿನ ವಿಧಾನಸಭಾ ಚುನಾವಣಾ ಭವಿಷ್ಯದ ಹಿತ ದೃಷ್ಟಿಯಿಂದ ತಮಗೆ ನೀಡಲಾಗಿದೆ. ಒಬ್ಬೊಬ್ಬ ಸಚಿವರಿಗೆ ಒದೊಂದು ಕ್ಷೇತ್ರವನ್ನು ಕೊಟ್ಟಿದೆ. ನಾನು ಸಂತೋಷದಿಂದ ತುಮಕೂರು ಗ್ರಾಮಾಂತರ ಕ್ಷೇತ್ರ ಮತ್ತು ಕುಣಿಗಲ್ ಕ್ಷೇತ್ರವನ್ನ ಕೊಡಬೇಕು ಎಂದು ಕೇಳಿದ್ದೆ. ಪಕ್ಷದ ಅಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಮಾಜಿ ಶಾಸಕ ಸುರೇಶ್ ಗೌಡ ನನ್ನ ಸ್ನೇಹಿತರು. ಈಗ ನಮ್ಮ ಎಲ್ಲಾ ಕಾರ್ಯಕರ್ತರ ಜೊತೆ ಸಭೆ ಮಾಡಬೇಕು ಎಂದು ಬಂದಿದ್ದೇನೆ. ಈ ಕ್ಷೇತ್ರ ನನ್ನ ತಾಯಿ ಹುಟ್ಟೂರು. ಈ ಭಾಗದಲ್ಲಿ ಬಹಳಷ್ಟು ನನ್ನ ಸಂಬಂಧಿಕರು ಇದ್ದಾರೆ. ಸುರೇಶ್‌ಗೌಡರು ಶಾಸಕರಾಗಿದ್ದಂತಹ ಕಾಲದಲ್ಲಿ ಈ ಕ್ಷೇತ್ರ ಅಭಿವೃದ್ಧಿಯಾಗಿದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಅತಿ ಹೆಚ್ಚು ಅನುದಾನ ತಂದು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರು ಗೆದ್ದಿದ್ದರೆ ಬಹಳಷ್ಟು ಅಭಿವೃದ್ಧಿಯಾಗುತ್ತಿತ್ತು. ಕಾರಣಾಂತರಗಳಿಂದ ಕಳೆದ ಬಾರಿ ಸೋತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬರಬೇಕಾಗಿದ್ದು, ಗೆಲ್ಲುವ ವಿಶ್ವಾಸವಿದೆ. ಅಧ್ಯಕ್ಷರು ಹಾಗೂ ಸಿಎಂ ಸೂಚನೆಯನ್ನ ಕೊಟ್ಟಿದ್ದು, ಸವಾಲು ಸ್ವೀಕಾರ ಮಾಡಿ ಪಕ್ಷವನ್ನ ಗೆಲ್ಲಿಸಿಕೊಂಡು ಬರುವ ಭರವಸೆ ಇದೆ. ಪ್ರತಿ 10 ದಿನಕ್ಕೊಮ್ಮೆ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರ ಜೊತೆ ಸಭೆ ನಡೆಸಿ, ಪಕ್ಷ ಸಂಘಟನೆ ಮಾಡಿ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಬಹುಮತಗಳಲ್ಲಿ ಪಕ್ಷವನ್ನ ಗೆಲ್ಲಿಸುವ ಕೆಲಸವನ್ನ ನಾವೆಲ್ಲಾ ಸೇರಿ ಮಾಡುತ್ತೇವೆ ಎಂದರು.
ಗಾಳಿಯಲ್ಲಿ ಗುಂಡು ಹೊಡೆವ ಕೆಂಪಣ್ಣ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶೇ. 40 ರಷ್ಟು ಕಮಿಷನ್ ಆರೋಪ ಮಾಡುತ್ತಾರೆ. ಕೆಂಪಣ್ಣ ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಕೆಂಪಣ್ಣಗೆ ನಾನು ಕೇಳುತ್ತೇನೆ. ನಿಮ್ಮ ಹತ್ತಿರ ದಾಖಲೆ, ಪುರಾವೆಗಳಿದ್ದರೆ ನಮ್ಮ ಪಕ್ಷದ ಅಧ್ಯಕ್ಷರಿಗೆ, ಸಿಎಂಗೆ ಕೊಡಿ. ಇಬ್ಬರು ಸಚಿವರ ಮೇಲೆ ಆರೋಪ ಮಾಡುತ್ತಿದ್ದಾರೆ. ಪೂರಕ ದಾಖಲೆ ಇದ್ದರೆ ತಂದು ಕೊಡಿ. ಪ್ರಚಾರಕ್ಕಾಗಿ, ಯಾರದ್ದೋ ತೇಜೋವಧೆಗಾಗಿ ಹೀಗೆ ಮಾಡಬೇಡಿ. ನೀವು 40, 50 ಪರ್ಸೆಂಟ್ ಕೊಟ್ಟು ಹೇಗೆ ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿದ ಗೋಪಾಲಯ್ಯ, ಆತ್ಮಸಾಕ್ಷಿ ಅನುಗುಣವಾಗಿ ಕೆಲಸ ಮಾಡಿ. ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತೆ ಮಾಡಬೇಡಿ. ಯಾರಿಗೆ ಕೊಟ್ಟಿದ್ದೀರಾ ಅನ್ನೋದನ್ನು ದಾಖಲೆ ಸಮೇತ ಬಿಡುಗಡೆ ಮಾಡಿ. 40 ಪರ್ಸೆಂಟ್ ಕಮಿಷನ್ ವಿಚಾರಕ್ಕಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟಿಲ್ಲ. ತನಿಖೆಯಲ್ಲಿ ಗೊತ್ತಾಗಿದೆ ಈಶ್ವರಪ್ಪ ಅವರದ್ದು ಪಾತ್ರ ಇಲ್ಲ ಅಂತ ಗೊತ್ತಾಗಿದೆ.
ಯಾರ ಮೇಲೆ ಆರೋಪ ಮಾಡಿದರೂ ಅದಕ್ಕೆ ಪೂರಕವಾದ ದಾಖಲೆಗಳಿರಬೇಕು. ಪೇಪರ್‌ನಲ್ಲಿ ಬರೆದುಕೊಟ್ಟು ತನಿಖೆ ಮಾಡಿ ಅಂದರೆ ಆಗುವುದಿಲ್ಲ. ಪ್ರಧಾನಿ ಅವರಿಗೆ ಪತ್ರ ಬರೆಯಿರಿ, ಸಿಎಂಗೆ ದಾಖಲೆ ಸಮೇತ ಕೊಡಿ. ಗುತ್ತಿಗೆದಾರರ ಸಂಘದ ಅಧ್ಯಕ್ಷದವರು ಮಾಧ್ಯಮದ ಮುಂದೆ, ವಿರೋಧ ಪಕ್ಷ ಮುಂದೆ ಮಾತನಾಡೋದಲ್ಲ. ಆರೋಪ ಇರುವಾಗ ದಾಖಲೆ ಕೊಡಬೇಕು. ಲಂಚ ಕೊಟ್ಟಿದ್ದಕ್ಕೆ ದಾಖಲೆ ಕೊಡುವುದಕ್ಕೆ ಆಗುವುದಿಲ್ಲ. ಲಂಚ ಕೊಡುವವರು ಸತ್ಯ ಹರಿಶ್ಚಂದ್ರರಾ? ಅವರ ಮೇಲೂ ಕಾನೂನು ಕ್ರಮ ಜರುಗಿಸಬೇಕಲ್ಲವೇ? ಇಂತಹವರು ಲಂಚ ಕೊಟ್ಟಿದ್ದಾರೆ ಅನ್ನೋದನ್ನು ಕೂಡ ದಾಖಲೆ ಕೊಡಿ. ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾದ ಮೇಲೆ ಯಾರು ಕೊಟ್ಟಿದ್ದಾರೆ, ಎಲ್ಲಿಂದ ಬಂತು ದುಡ್ಡು ಅನ್ನೋದು ಗೊತ್ತಾಗಲಿ. ದಾಖಲೆಗಳನ್ನು ಬಿಡುಗಡೆ ಮಾಡಿ. ನೀವು ದೊಡ್ಡವರು ಲಂಚ ತೆಗೆದುಕೊಂಡಿರುವವರು ಶಿಕ್ಷೆ ಅನುಭವಿಸುತ್ತಾರೆ ಎಂದು ಗೋಪಾಲಯ್ಯ ಹೇಳಿದರು.
ಸಿದ್ದರಾಮಯ್ಯಗೆ ಮುಪ್ಪಿನ ಕಾಲಕ್ಕೆ ಜ್ಞಾನೋದಯವಾಗಿದೆ: ಸಚಿವ ಕಾರಜೋಳ
ಕೇಂದ್ರದ ನಿರ್ಧಾರ ಅನುಸರಿಸಿ ರಾಜ್ಯ ತೀರ್ಮಾನ: ಅನ್ನಭಾಗ್ಯ ಯೋಜನೆ ಕೈ ಬಿಡುವ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋಪಾಲಯ್ಯ, 2020 ಏಪ್ರಿಲ್ 1 ತಾರೀಕಿನಿಂದ ಕೊರೋನಾ ಪ್ರಾರಂಭವಾದಾಗಿನಿಂದಲೂ ನಾನೇ ಆಹಾರ ಸಚಿವನಾಗಿದ್ದೆ, ರಾಜ್ಯ ಸರ್ಕಾರ ಒಂದು ಕುಟುಂಬಕ್ಕೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಕೊಡಬೇಕು ಎಂಬ ಕಾರ್ಯಕ್ರಮ ರೂಪಿಸಿತ್ತು. ಪ್ರಧಾನಿ ಮೋದಿಯವರು, ದೇಶದ 80 ಕೋಟಿ ಜನರಿಗೆ 2020 ರಿಂದ ಪ್ರತಿ ತಿಂಗಳು ಕೇಂದ್ರದಿಂದ 5 ಕೆಜಿ ಅಕ್ಕಿ ಕೊಡಬೇಕು. ಯಾರೂ ಹಸಿವಿನಿಂದ ಸಾಯಬಾರದು ಎನ್ನುವ ನಿರ್ಧಾರದಿಂದ ಈಗಲು ಅಕ್ಕಿಯನ್ನು ಕೊಡಲಾಗುತ್ತಿದೆ. ಅದು ಮುಂದಿನ ಸೆಪ್ಟಂಬರ್ ತಿಂಗಳವರೆಗೆ ಇದೆ. ಮುಂದೆ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದರ ಮೇಲೆ ರಾಜ್ಯ ಸರ್ಕಾರದ ಆಹಾರ ಸಚಿವರು ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿಯ ಜೊತೆಗೆ ಉಚಿತ ಮೊಟ್ಟೆ ಕೊಡುವ ವಿಷಯದ ಬಗ್ಗೆ ಮಾಹಿತಿಯಿಲ್ಲ. ಸಂಬಂಧಪಟ್ಟ ಸಚಿವರನ್ನು ಕೇಳಬೇಕು ಎಂದರು.