
ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಚಿವರೊಂದಿಗೆ ನಡೆಸುತ್ತಿರುವ ಮುಖಾಮುಖಿ ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಪ್ರಸ್ತಾಪ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಪಕ್ಷದಲ್ಲಿ ಇದ್ದರೂ ರಾಜ್ಯದಲ್ಲಿ ಒಬ್ಬರಿಗೇ ಒಬ್ಬರಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆ ಹಾಗೂ ದೊಡ್ಡ ಖಾತೆಯನ್ನೂ ನೀಡಲಾಗಿದೆ. ಇದರಿಂದ ಒಂದೆಡೆ ಪಕ್ಷ ಸಂಘಟನೆಗೂ ಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದಿಲ್ಲ. ಮತ್ತೊಂದೆಡೆ ತಮ್ಮ ಇಲಾಖೆಯನ್ನೂ ಸಮರ್ಪಕವಾಗಿ ನೋಡಿಕೊಳ್ಳಲಾಗುವುದಿಲ್ಲ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟಿಸಬೇಕಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡುವುದು ಸೂಕ್ತ ಎಂದು ಸತೀಶ್ ಜಾರಕಿಹೊಳಿ ಅವರು ತಮ್ಮ ಅಭಿಪ್ರಾಯವನ್ನು ಸುರ್ಜೇವಾಲ ಅವರ ಮುಂದಿಟ್ಟರು. ಅಲ್ಲದ, ತಮ್ಮ ಅಭಿಪ್ರಾಯವನ್ನು ಎಐಸಿಸಿ ಅಧ್ಯಕ್ಷರು ಮತ್ತು ರಾಹುಲ್ ಗಾಂಧಿ ಅವರಿಗೂ ಗಮನಕ್ಕು ತಂದಿರುವುದಾಗಿ ಹೇಳಿದರು ಎನ್ನಲಾಗಿದೆ.
ಇದಕ್ಕೆ, ಪ್ರತಿಕ್ರಿಯೆ ನೀಡಿದ ಸುರ್ಜೇವಾಲ ಅವರು, ಪಕ್ಷ ಸಂಘಟನೆ ಹಿತದೃಷ್ಟಿಯಿಂದ ನಿಮ್ಮ ಅಭಿಪ್ರಾಯ, ಸಲಹೆ ಒಳ್ಳೆಯದಿದೆ. ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೂ ತರುವುದಾಗಿ ಹೇಳಿದರು ಎಂದು ಹೇಳಲಾಗಿದೆ.
ಪಕ್ಷ ಸಂಘಟನೆ ಬಗ್ಗೆ ನಾನು ಚರ್ಚಿಸಿಲ್ಲ
ಸುರ್ಜೇವಾಲ ಅವರೊಂದಿಗಿನ ಸಭೆಯಲ್ಲಿ ನಮ್ಮ ಇಲಾಖಾ ವಿಚಾರಗಳು, ಶಾಸಕರ ದೂರುಗಳ ವಿಚಾರವಾಗಿ ಚರ್ಚೆಯಾಗಿದೆ. ಪಕ್ಷ, ಪಕ್ಷ ಸಂಘಟನೆ ವಿಚಾರವಾಗಿ ಯಾವುದೇ ಚರ್ಚೆ ಮಾಡಿಲ್ಲ. ನಾನೂ ಕೂಡ ವೈಯಕ್ತಿಕವಾಗಿ ಏನನ್ನೂ ಚರ್ಚಿಸಿಲ್ಲ.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.