
ಬೆಳಗಾವಿ(ಅ.07): ಇಡೀ ಪ್ರಪಂಚ, ದೇಶ, ರಾಜ್ಯಕ್ಕೆ ಸಿದ್ದರಾಮಯ್ಯ ಎಂತಹ ಲಾಯಕ್ ವ್ಯಕ್ತಿ ಎಂಬುದು ಗೊತ್ತು. ಅವರು ಮುಖ್ಯಮಂತ್ರಿಯಾಗಿ ಎಂತಹ ಆಡಳಿತ ನೀಡುತ್ತಿದ್ದಾರೆ ಎಂಬುದೂ ಎಲ್ಲರಿಗೂ ಗೊತ್ತಿದೆ. ಬಿಜೆಪಿಯಂತ ನಾಲಾಯಕರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿರುಗೇಟು ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾಲಾಯಕ್ ಎಂಬ ಬಿಜೆಪಿ ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇಂದಿರಾ ಕ್ಯಾಂಟಿನ್ ತುಂಬಾ ಕಷ್ಟದಲ್ಲಿವೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಿಂದಿನ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟಿನ್ ಯೋಜನೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸರಿಯಾದ ನಿರ್ವಹಣೆ ಮಾಡದೇ ಇಂದಿರಾ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಈ ಯೋಜನೆ ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಇಂದಿರಾ ಕ್ಯಾಂಟಿನ್ ಪುನಶ್ಚೇತನದ ಉದ್ದೇಶದಿಂದ 240 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಪ್ರಾದೇಶಿಕವಾಗಿ ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ,ಇಡ್ಲಿ ವಿತರಿಸುವ ಮೆನು ಸಿದ್ಧಪಡಿಸಿ, ಜಾರಿಗೊಳಿಸುತ್ತೇವೆ ಎಂದರು.
ಸಕ್ಕರೆ ಕಾರ್ಖಾನೆ ಮಾಲೀಕರು-ಎಂಡಿ ಸಭೆ; ನ.1ರ ನಂತರವೇ ಕಬ್ಬು ನುರಿಸಬೇಕು- ಡಿಸಿ ಸೂಚನೆ
ಬೆಳಗಾವಿ ಮಹಾನಗರ ಪಾಲಿಕೆ ವಿಸ್ತರಣೆಗೆ ಪ್ರಸ್ತಾವನೆ ಕೊಟ್ಟರೆ ಇಲ್ಲಿನ ಶಾಸಕರು, ಜನರ ಬೇಡಿಕೆಗೆ ಅನುಗುಣವಾಗಿ, ಅನುಕೂಲ ಆಗುವುದಾದರೆ ಪಾಲಿಕೆ ದೊಡ್ಡದು ಮಾಡೋದಾದ್ರೆ ನೂರಕ್ಕೆ ನೂರು ಮಾಡಿಕೊಡುತ್ತೇವೆ ಎಂದರು.
ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಪತ್ರಗಳನ್ನು ಈಗಾಗಲೇ ನಾನು ಮತ್ತು ಸಚಿವ ರಹೀಂಖಾನ್ ವಿತರಿಸುತ್ತಿದ್ದೇವೆ. ಎಲ್ಲೆಲ್ಲಿ ಕಡಿಮೆ ಇದ್ದಾರೆ, ಅಲ್ಲೆಲ್ಲಾ ಪೌರಕಾರ್ಮಿಕರನ್ನು ತುಂಬಿಕೊಳ್ಳುತ್ತೇವೆ. ಇರುವ ಪೌರಕಾರ್ಮಿಕರಿಗೆ ಮನೆ ಕಟ್ಟಿ ಕೊಡುವುದು, ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭೈರತಿ ಸುರೇಶ ಭರವಸೆ ನೀಡಿದರು.
ಇದಕ್ಕೂ ಮೊದಲು ನಗರದಲ್ಲಿರುವ ಚನ್ನಮ್ಮಾಜೀ, ಡಾ.ಬಿ.ಆರ್.ಅಂಬೇಡ್ಕರ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಪೌರಾಡಳಿತ ಸಚಿವ ರಹೀಂಖಾನ್, ಶಾಸಕ ಆಸೀಫ್ ಸೇಠ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.