ಸರ್ಜಿಕಲ್ ಸ್ಟ್ರೈಕ್ ಉದಾಹರಣೆ ತೆಗೆದುಕೊಂಡು ಪ್ರಧಾನಿ ಮೋದಿ ಅವರನ್ನು ಗುಂಡಿಗೆಯ ಗಂಡು ಎಂದು ಹೊಗಳಿದ ಆನಂದ ಸಿಂಗ್ ಕಾಂಗ್ರೆಸ್ಸಿನವರಿಗೆ ‘ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ’ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಂಗಾವತಿ (ಏ.03): ಸರ್ಜಿಕಲ್ ಸ್ಟ್ರೈಕ್ ಉದಾಹರಣೆ ತೆಗೆದುಕೊಂಡು ಪ್ರಧಾನಿ ಮೋದಿ ಅವರನ್ನು ಗುಂಡಿಗೆಯ ಗಂಡು ಎಂದು ಹೊಗಳಿದ ಆನಂದ ಸಿಂಗ್ ಕಾಂಗ್ರೆಸ್ಸಿನವರಿಗೆ ‘ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ’ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾಲೂಕಿನ ಮರಳಿ ಬಳಿ ಖಾಸಗಿ ಹೋಟೆಲ್‌ನಲ್ಲಿ ಜರುಗಿದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಯುದ್ಧ ಎಂದು ಭಾವಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರಧಾನಿ ಮೋದಿ ಕೈ ಬಲಪಡಿಸಬೇಕು. ದೇಶವನ್ನಾಳಿದ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಶ್ರಮಿಸಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾಡಿಲ್ಲ.
ಪ್ರಧಾನಿ ಕರೆ ನೀಡಿದಂತೆ ಕಾರ್ಯ ಮಾಡಬೇಕು. ಮೋದಿ ಅವರು ದೇಶದ ಹಿತ ಮತ್ತು ಸಂರಕ್ಷಣೆಗಾಗಿ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ. ಪೇಪರ್, ಟಿವಿಗಳಲ್ಲಿ ಹುಟ್ಟಿದ ಪಕ್ಷ ಬಿಜೆಪಿ ಅಲ್ಲ. ತ್ಯಾಗ, ಬಲಿದಾನದಿಂದ ಬಿಜೆಪಿ ಕಟ್ಟಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಬಿಜೆಪಿಗಾಗಿ ದುಡಿಯಬೇಕಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲವಾಗಿದ್ದು, ಕರ್ನಾಟಕದಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು. ವಿಜಯನಗರ ಸಾಮ್ರಾಜ್ಯ ಕಟ್ಟಿಬೆಳೆಸಿದಂತೆ ಬಿಜೆಪಿ ಮೂಲಕ ರಾಜ್ಯ ಕಟ್ಟಬೇಕು. ವಿಜಯನಗರ ಸಾಮ್ರಾಜ್ಯ ನಾಶ ಮಾಡಿದ ಶತ್ರುಗಳಂತೆ ಈಗಲೂ ಕೆಲವರು ಇದ್ದು, ಅವರನ್ನು ಸದೆ ಬಡಿದು ದೇಶದ ಹಿತ ಕಾಪಾಡುವ ಕಾರ್ಯ ಮಾಡಬೇಕಿದೆ ಎಂದರು.
undefined
ಹೆಚ್ಚಿನ ಲೀಡ್ ನೀಡಿ ಗೆಲ್ಲಿಸುವ ಹೊಣೆ ನಿಮ್ಮದು: ಬಾಲಚಂದ್ರ ಜಾರಕಿಹೊಳಿ
ಪಕ್ಷದ ಬಗ್ಗೆ ತಿಳಿಯಬೇಕಾದರೆ ಪ್ರಧಾನಿ ಮೋದಿ ಅವರು ಭಾಷಣ ಕೇಳಬೇಕು. ಇತ್ತೀಚೆಗೆ ಅವರು ದೆಹಲಿಯಲ್ಲಿ ಮಾಡಿದ ಭಾಷಣ ಕೇಳಿದರೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹುಮ್ಮಸ್ಸು ಬರುತ್ತದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ. ನಾವೆಲ್ಲರೂ ನಮ್ಮ ಪ್ರಧಾನಿ ಕೈ ಬಲಪಡಿಸಬೇಕಾಗಿದೆ. ಇದರಿಂದ ನಮ್ಮ ದೇಶ ಜಗತ್ತಿನಲ್ಲಿ ವಿಶ್ವಗುರು ಆಗಲಿದೆ. ಮಾಧ್ಯಮಗಳ ಮೂಲಕ ಬಿಜೆಪಿ ನಾಯಕರ ಬಗ್ಗೆ ಪ್ರಚಾರ ಮಾಡಬೇಕಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಗಂಡೆದೆ ಗಂಡು, ರಾಜಹುಲಿ ಎಂದು ಹೊಗಳಿದ ಆನಂದ್ ಸಿಂಗ್ ನಮ್ಮ ವಿಜಯನಗರವನ್ನು ಜಿಲ್ಲೆ ಮಾಡಿದ್ದು ನಮ್ಮ ಗುಂಡಿಗೆಯ ಗಂಡು ಯಡಿಯೂರಪ್ಪ ಅವರು ಎಂದು ಶ್ಲಾಘಿಸಿದರು.
ಸಚಿವ ಹಾಲಪ್ಪ ಆಚಾರ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ನಾಯಕರು ಇಲ್ಲದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಹೋಗಿ ಏನು ಹೇಳಲು ವಿಷಯ ಇಲ್ಲ ಎಂದ ಅವರು, ಚುನಾವಣೆ ಬಂದಾಗ ಯೋಜನೆಗಳ ಬಗ್ಗೆ ಗ್ಯಾರಂಟಿ ಕಾರ್ಡ್ ಕೊಡುವುದಾಗಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ನೀರಾವರಿಗೆ 10 ಸಾವಿರ ಕೋಟಿ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಅನುಷ್ಠಾನಗೊಳಿಸಿದೆ ಎಂದರು. ಸಂಸದ ಕರಡಿ ಸಂಗಣ್ಣ ಮಾತನಾಡಿ, ಪಕ್ಷದ ಪ್ರಚಾರಕ್ಕೆ ಡಿಜಿಟಲ್ ಮಾಧ್ಯಮ ಮುಖ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲಿಸಬೇಕೆಂದ ಅವರು, ರಾಜ್ಯದಲ್ಲಿ 130ಕ್ಕೂ ಹೆಚ್ಚು ಸ್ಥಾನ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡಿಲ್ಲ: ಬಾಲಚಂದ್ರ ಜಾರಕಿಹೊಳಿ
ಶಾಸಕ ಪರಣ್ಣ ಮುನವಳ್ಳಿ, ಶಾಸಕ ಬಸವರಾಜ ದಢೇಸೂಗೂರು, ಸಂಸದ ದೇವೇಂದ್ರಪ್ಪ ನಾಯಕ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಮಾಜಿ ಶಾಸಕ ಜಿ. ವೀರಪ್ಪ, ನೆಕ್ಕಂಟಿ ಸೂರಿಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ, ಮಾಜಿ ಶಾಸಕ ಕೆ. ಶರಣಪ್ಪ ಹಾಗೂ ಬಳ್ಳಾರಿ, ರಾಯಚೂರು, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಪ್ರಮುಖರು ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.