
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಮಾ.13): ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲೀಗ ಬಿಜೆಪಿಯಿಂದ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ರ ಪುತ್ರ ಸಿದ್ಧಾರ್ಥ ಸಿಂಗ್ ಕಣಕ್ಕಿಳಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಸಮಾಜಸೇವೆಯಿಂದ ರಾಜಕೀಯಕ್ಕೆ ಎಂಟ್ರಿ ಹೊಡೆಯುವ ಸಾಧ್ಯತೆ ಇದೆ.
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರು ಒಂದು ಉಪ ಚುನಾವಣೆ ಸೇರಿ ನಾಲ್ಕು ಬಾರಿ ವಿಜಯನಗರ ಕ್ಷೇತ್ರ ಪ್ರತಿನಿಧಿಸಿದ್ದಾರೆ. ವಿಜಯನಗರ ಜಿಲ್ಲೆ ರೂವಾರಿಯೂ ಆಗಿರುವ ಆನಂದ ಸಿಂಗ್ ಈಗ ಕ್ಷೇತ್ರ ತ್ಯಾಗ ಮಾಡಿ, ತನ್ನ ಪುತ್ರ ಸಿದ್ಧಾರ್ಥ ಸಿಂಗ್‌ರನ್ನು ಕಣಕ್ಕಿಳಿಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ದೃಢಪಡಿಸಿವೆ.
ಎಲ್ಲಿಯ ಸಿಯಾಟ್ಟಲ್, ಎಲ್ಲಿಯ ತುಂಗೆ, ಅಮೆರಿಕ ಪುರಾತತ್ವಜ್ಞನ ಅಸ್ಥಿ ಹಂಪಿಯ ತುಂಗಭದ್ರೆಯಲ್ಲಿ ಲೀನ!
ಸಿಂಗ್ ಚಿತ್ತ ಲೋಕಸಭೆಯತ್ತ:
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರು ಕೊಪ್ಪಳ ಲೋಕಸಭೆಯಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತಮ್ಮ ಆಪ್ತರ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕಣಕ್ಕಿಳಿದು ಕೇಂದ್ರ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವಿಜಯನಗರ ಕ್ಷೇತ್ರದಿಂದ ಸಿದ್ಧಾರ್ಥ ಸಿಂಗ್ ಕಣಕ್ಕಿಳಿಯಲ್ಲಿದ್ದು, ಈಗಾಗಲೇ ಕ್ಷೇತ್ರದಲ್ಲಿ ಆನಂದ ಸಿಂಗ್‌ರ ಸರಿಸಮಾನವಾಗಿ ಸಿದ್ಧಾರ್ಥ ಸಿಂಗ್‌ರ ಹೆಸರು ಕೇಳಿ ಬರುತ್ತಿದೆ.
ಯುವ ನಾಯಕ ಸಿದ್ಧಾರ್ಥ ಸಿಂಗ್ ಅವರು ಈಗಾಗಲೇ ಗ್ರಾಮವಾಸ, ಜನರ ವಿಶ್ವಾಸ ಎಂಬ ಕಾರ್ಯಕ್ರಮದ ಮೂಲಕ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಇನ್ನು ಕಮಲಾಪುರ ಪಟ್ಟಣದಲ್ಲೂ ವಾಸ್ತವ್ಯ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದು, ರೈತರ, ಗ್ರಾಮೀಣ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ದಾನ, ಧರ್ಮ, ಸಮಾಜ ಸೇವೆಯಲ್ಲೂ ಕ್ಷೇತ್ರದಲ್ಲಿ ಮುಂದಿದ್ದಾರೆ.
ಕ್ರೀಡೆಗೆ ಪ್ರೋತ್ಸಾಹ:
ವಿಜಯನಗರ ಕ್ಷೇತ್ರದಲ್ಲಿ ಯುವಕರ ಮನ ಗೆದ್ದಿರುವ ಸಿದ್ಧಾರ್ಥ ಸಿಂಗ್ ವಿಜಯನಗರ ಪ್ರೀಮಿಯರ್ ಲೀಗ್ ಟಿ- 20 ಕ್ರಿಕೆಟ್ ಪಂದ್ಯಾವಳಿ ನಡೆಸಿದ್ದಾರೆ. ‘ಕಲ್ಯಾಣ ಕರ್ನಾಟಕ ಕಬಡ್ಡಿ ವೈಭವ’ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಸೈ ಎನಿಸಿದ್ದಾರೆ. ಕ್ರೀಡಾಪಟುಗಳಿಗೆ ಧನ ಸಹಾಯ, ಪ್ರೋತ್ಸಾಹ ನೀಡುತ್ತಿರುವ ಸಿದ್ಧಾರ್ಥ ಸಿಂಗ್, ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಎಲ್‌ಎಲ್‌ಬಿ ಪದವೀಧರನಾಗಿರುವ ಸಿದ್ಧಾರ್ಥ ಸಿಂಗ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ವಿಜಯನಗರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಎಂದು ಸಚಿವರ ಆಪ್ತವಲಯ ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದೆ.
ಈಗಾಗಲೇ ಆನಂದ ಸಿಂಗ್ ಅವರು ತಮ್ಮ ಭಾಷಣದಲ್ಲಿ ಸೂಕ್ಷ್ಮವಾಗಿ ಉಲ್ಲೇಖಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಜನರ ಬಳಿ ಅಭಿವೃದ್ಧಿ ಕಾರ್ಯದೊಂದಿಗೆ ಪುತ್ರನ ಪರ ಮತ ಕೇಳಲು ಆನಂದ ಸಿಂಗ್ ಅವರು ಸಜ್ಜಾಗಿದ್ದಾರೆ. ಈ ಕುರಿತು ಬಿಜೆಪಿ ಹೈಕಮಾಂಡ್‌ಗೂ ತಿಳಿಸಿರುವ ಆನಂದ ಸಿಂಗ್ ಅವರು, ಪುತ್ರನನ್ನು ವಿಧಾನಸೌಧಕ್ಕೆ ಕಳುಹಿಸಲು ಮನಸ್ಸು ಮಾಡಿದ್ದಾರೆ. ಜತೆಗೆ ಲೋಕಸಭೆಗೆ ಆನಂದ ಸಿಂಗ್ ಅವರು ತೆರಳಲು ಈಗಾಗಲೇ ಕೊಪ್ಪಳದಲ್ಲಿ ಭೂಮಿಕೆ ಸಿದ್ಧಪಡಿಸುತ್ತಿದ್ದಾರೆ.
ವಿಜಯನಗರ: ಗೆಲುವಿನ ‘ಆನಂದ’ಕ್ಕೆ ಬ್ರೇಕ್ ಹಾಕುವುದೇ ಕಾಂಗ್ರೆಸ್?
ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಣಕ್ಕಿಳಿಯುವುದರ ಬಗ್ಗೆ ಈಗಲೇ ಹೇಳಲಾಗುವುದಿಲ್ಲ. ಸಿದ್ಧಾರ್ಥ ಸಿಂಗ್‌ಗೂ ಉತ್ತಮ ಭವಿಷ್ಯ ಇದೆ ಅಂತ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಈಗ ನಾನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವೆ. ವಿಜಯನಗರದಲ್ಲಿ ಗ್ರಾಮೀಣ ಕ್ರೀಡೆ ಕುಸ್ತಿ ಆಡಿಸುವ ಬಯಕೆ ಇದೆ. ರಾಜಕೀಯ ಅಖಾಡದ ಬಗ್ಗೆ ನಾನು ಮಾತನಾಡಲಾರೆ ಅಂತ ಯುವ ನಾಯಕ ಸಿದ್ಧಾರ್ಥ ಸಿಂಗ್ ತಿಳಿಸಿದ್ದಾರೆ.
ಸಿಂಗ್ ಕುಟುಂಬಕ್ಕೆ ಒಲಿದಿರುವ ವಿಜಯನಗರ!
ವಿಜಯನಗರ ಕ್ಷೇತ್ರದಲ್ಲಿ ಆನಂದ ಸಿಂಗ್‌ರ ಚಿಕ್ಕಪ್ಪ ಸತ್ಯನಾರಾಯಣ ಸಿಂಗ್ ಎರಡು ಬಾರಿ ಶಾಸಕರಾಗಿದ್ದಾರೆ. ಅಣ್ಣ ರತನ್ ಸಿಂಗ್ ಒಮ್ಮೆ ಶಾಸಕರಾಗಿದ್ದಾರೆ. ಇವರ ಸಹೋದರ ಪ್ರವೀಣ ಸಿಂಗ್ ಹಂಪಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಇನ್ನು ಆನಂದ ಸಿಂಗ್ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಸಿಂಗ್ ಕುಟುಂಬಕ್ಕೂ ವಿಜಯನಗರ ಕ್ಷೇತ್ರಕ್ಕೂ ಭಾರಿ ನಂಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.