ಗ್ಯಾಸ್‌ ದರ ಹೆಚ್ಚಳದಿಂದ ಹಲವು ನಾಯಕರ ಸೋಲು: ಶಾಸಕ ಶಿವರಾಮ ಹೆಬ್ಬಾರ್

By Kannadaprabha News  |  First Published May 18, 2023, 11:59 PM IST

ಯಾರು ಎಷ್ಟೇ ಪ್ರಯತ್ನ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಸರ್ಕಾರದ ಮೇಲಿನ ವಿರೋಧಿ ಅಲೆಯಿಂದಾಗಿ ಗೆಲುವಿನ ಅಂತರ ಕಡಿಮೆಯಾಯಿತು ಎಂದು ನೂತನ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. 


ಮುಂಡಗೋಡ (ಮೇ.18): ಯಾರು ಎಷ್ಟೇ ಪ್ರಯತ್ನ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಸರ್ಕಾರದ ಮೇಲಿನ ವಿರೋಧಿ ಅಲೆಯಿಂದಾಗಿ ಗೆಲುವಿನ ಅಂತರ ಕಡಿಮೆಯಾಯಿತು ಎಂದು ನೂತನ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಇಲ್ಲಿಯ ಗ್ರಾಮದ ದೇವಿ ಮಾರಿಕಾಂಬಾ ದೇವಾಲಯ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 10 ಕೆ.ಜಿ ಇದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿರುವುದು, ಒಳ ಮೀಸಲಾತಿ ಸೇರಿದಂತೆ ಹಲವು ವಿಚಾರಗಳಿಂದ ಎದ್ದ ಸರ್ಕಾರದ ವಿರೋಧಿ ಅಲೆಯಿಂದ ಹಲವು ನಾಯಕರು ಸೋಲು ಅನುಭವಿಸಬೇಕಾಯಿತು. ಅಲ್ಲದೇ ಗ್ಯಾಸ್‌ ದರ ಹೆಚ್ಚಳ, ವಿದ್ಯುತ್‌ ದರ ಹೆಚ್ಚಳ ಸೇರಿದಂತೆ ಕಾಂಗ್ರೆಸ್ಸಿನ 2000 ಗ್ಯಾರಂಟಿ ಕಾರ್ಡ್‌, ಹೆಣ್ಣುಮಕ್ಕಳಿಗೆ ಉಚಿತ ಬಸ್‌ ಪ್ರಯಾಣ, 10 ಕೆಜಿ ಅಕ್ಕಿ ಹಾಗೂ ಹಲವು ಅಲೆಗಳಿಗೆ ನಮ್ಮ ಪಕ್ಷದ ಹಲವು ನಾಯಕರು ಬಲಿಪಶು ಆಗಬೇಕಾಯಿತು ಎಂದರು.

ಲಿಂಗಾಯತ ಪಂಚಮಸಾಲಿ, ಎಸ್‌ಸಿ, ಎಸ್‌ಟಿ ಒಳ ಮೀಸಲಾತಿಯಿಂದ ಇತರೇ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಯಿತು. ಶೇ.80ರಷ್ಟುಮತ ನೀಡುವ ಲಂಬಾಣಿ ಸಮುದಾಯದ ಮತಗಳನ್ನು ಕೂಡ ಈ ಬಾರಿ ನಿರೀಕ್ಷೆಯಂತೆ ಪಡೆಯಲಾಗಲಿಲ್ಲ. ಲಂಬಾಣಿ ಜನಾಂಗ ಹೆಚ್ಚು ಪ್ರಮಾಣದಲ್ಲಿರುವ ವಿಜಯಪುರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನಮಗೆ ಹಿನ್ನಡೆಯಾಗಿದೆ. ಲಂಬಾಣಿ ಮತ್ತು ಭೋವಿ ಸಮುದಾಯಗಳಿಗೆ ಯಾವುದೇ ಅನ್ಯಾಯ ಮಾಡದೇ ಇದ್ದರೂ ಕೂಡ ಅದನ್ನು ಮನವರಿಕೆ ಮಾಡುವಲ್ಲಿ ನಮ್ಮ ಪಕ್ಷ ವಿಫಲವಾಗಿದ್ದು, ತಪ್ಪು ಅಪವಾದಗಳನ್ನು ಮೈ ಮೇಲೆ ಹಾಕಿ ಕೊಳ್ಳಬೇಕಾಯಿತು ಎಂದರು.

Latest Videos

undefined

ಕಳಂಕ ತರುವವರ ಮೇಲೆ ಹದ್ದಿನ ಕಣ್ಣು: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

ಎಲ್ಲ ಚುನಾವಣೆಗಳಲ್ಲಿ ಕೂಡ ಮುಂಡಗೋಡ ತಾಲೂಕು ನಮಗೆ ಹೆಚ್ಚಿನ ಮತ ನೀಡಿತ್ತು. ಆದರೆ ಈ ಒಂದು ಚುನಾವಣೆಯಲ್ಲಿ ಇಲ್ಲಿ ಕಡಿಮೆ ಮತ ಬಂದಿರಬಹುದು. ಮತ ಹಾಕದವರು ನಮ್ಮ ವೈರಿಗಳಲ್ಲ. ಕಾರಣಾಂತರಗಳಿಂದ ಮತದಾರರು ಬದಲಾಗುತ್ತಾರೆ. ಇದರಿಂದ ಪ್ರತಿಯೊಬ್ಬರ ಮನದಾಳ ಅರ್ಥ ಮಾಡಿಕೊಂಡು ನಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂದರು. ಕೋವಿಡ್‌ ಫುಡ್‌ ಕಿಟ್‌ ನೀಡುವುದರಿಂದ ಹಿಡಿದು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಯಾವುದೇ ಜಾತಿ ಧರ್ಮ ನೋಡದೇ ಪ್ರತಿಯೊಬ್ಬರಿಗೂ ವಿತರಿಸಲಾಗಿದೆ. ಆದರೂ ಮುಂಡಗೋಡನಲ್ಲಿ ಮತದ ಪ್ರಮಾಣ ಕಡಿಮೆಯಾಗಿದೆ. 

ಯೋಜನೆ ಪಡೆದವರು ಕೃತಜ್ಞತೆ ಸಲ್ಲಿಸದೇ ಇದ್ದರೂ ದೇವರು ನನ್ನನ್ನು ಗೆಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾನೆ. ಮುಂಡಗೋಡ ತಾಲೂಕಿನ ಬಿಜೆಪಿ ಕಾರ್ಯಕರ್ತರು ಸಾಕಷ್ಟುಶ್ರಮಪಟ್ಟು ಸುಮಾರು 27 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಡಿಮೆ ಮತ ಬಂದಿದೆ ಎಂಬುವುದನ್ನು ಮನಸಲ್ಲಿ ಇಟ್ಟುಕೊಳ್ಳಬೇಡಿ. ಬದಲಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಈ ಸರ್ಕಾರದಲ್ಲಿ ನಮ್ಮ ಕ್ಷೇತ್ರಕ್ಕೆ ಸಿಗಬೇಕಾದ ಸಿಂಹ ಪಾಲು ಅಭಿವೃದ್ಧಿ ಅನುದಾನವನ್ನು ತಂದೇ ತರುತ್ತೇನೆ. ಅನುದಾನ ಪಡೆದುಕೊಳ್ಳುವುದು ನಮ್ಮ ಹಕ್ಕು. 

ಶಾಸಕರ ಅನುದಾನವನ್ನು ತಡೆಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮಂತ್ರಿ ಇದ್ದಾಗಲೂ ವಿರೋಧ ಪಕ್ಷದ ಶಾಸಕರು ನಮ್ಮಿಂದ ಸಾಕಷ್ಟುಕೆಲಸ ಪಡೆದುಕೊಂಡಿದ್ದಾರೆ. ಎಲ್ಲರೂ ಸ್ನೇಹಿತರಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ತಂದು ಅಭಿವೃದ್ಧಿಪಡಿಸುತ್ತೇನೆ. ಅಷ್ಟುಶಕ್ತಿ ನಮಗಿದೆ. ನಮ್ಮ ಶಕ್ತಿ ಸಾಕಾಗದಿದ್ದರೆ ಮಾತ್ರ ಕ್ಷೇತ್ರದ ಜನತೆಯ ಶಕ್ತಿ ಬಳಸುತ್ತೇನೆ ಎಂದರು. ಮಾಜಿ ಜಿಪಂ ಉಪಾಧ್ಯಕ್ಷ ಎಲ್‌.ಟಿ. ಪಾಟೀಲ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಅಶೋಕ ಚಲವಾದಿ, ಶ್ರೀಕಾಂತ ಸಾನು, ಕೆಂಜೋಡಿ ಗಲಬಿ, ಸಂತೋಷ ತಳವಾರ, ಪರಶುರಾಮ ತಹಸೀಲ್ದಾರ, ಗುರು ಕಾಮತ, ಶಿವರಾಜ ಸುಬ್ಬಾಯವರ, ಫಕ್ಕೀರಸ್ವಾಮಿ ಗುಲ್ಯಾನವರ, ವೈ.ಪಿ. ಪಾಟೀಲ, ರವಿ ಹಾವೇರಿ, ತುಕಾರಾಮ ಇಂಗಳೆ, ವಿಠ್ಠಲ ಬಾಳಂಬೀಡ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

ಗ್ರಾಮದ ದೇವಿಯ ದರ್ಶನ ಪಡೆದ ಹೆಬ್ಬಾರ: ನೂತನ ಶಾಸಕ ಶಿವರಾಮ ಹೆಬ್ಬಾರ ನಗರದ ಗ್ರಾಮದೇವಿ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

click me!