ಬೆಂಗಳೂರು ಉತ್ತರ ಲೋಕಸಭಾ ಕದನ: ಸದಾನಂದಗೌಡ ಕ್ಷೇತ್ರದ ಮೇಲೆ ಬಿಜೆಪಿಯ ಹಲವರ ಕಣ್ಣು

By Kannadaprabha NewsFirst Published Jan 28, 2024, 6:06 AM IST
Highlights

ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಘೋಷಣೆ ಮಾಡಿದ್ದ ಹಾಲಿ ಸಂಸದ ಸದಾನಂದಗೌಡ ಅವರು ಬದಲಾದ ಸನ್ನಿವೇಶದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧ ಅಂತ ಹೇಳಿರುವುದು ಇತರ ಆಕಾಂಕ್ಷಿಗಳಿಗೆ ಸ್ವಲ್ಪ ನಿರಾಸೆಯಾಗಿದೆ. ಆದರೂ ಸದಾನಂದಗೌಡರಿಗೆ ಮತ್ತೊಮ್ಮೆ ಟಿಕೆಟ್ ಸಿಗುವ ಅನುಮಾನವಿದೆ. 

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜ.28): ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ. 1977ರಿಂದ 2019 ರವರೆಗೆ 12 ಚುನಾವಣೆ ನಡೆದಿದ್ದು, 1977ರಿಂದ 1999ರವರೆಗೆ ನಡೆದ ಎಂಟು ಚುನಾವಣೆಯಲ್ಲಿ ಏಳರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಳಿಕ ನಡೆದ ನಾಲ್ಕೂ ಚುನಾವಣೆಯಲ್ಲೂ ಗೆದ್ದು ಬೀಗಿರುವ ಬಿಜೆಪಿಯು ಕ್ಷೇತ್ರವನ್ನು ತನ್ನ ಭದ್ರಕೋಟೆಯಾಗಿ ಬದಲಿಸಿಕೊಂಡಿದೆ. ಇನ್ನು ಇಲ್ಲಿ ಜೆಡಿಎಸ್‌ ಪಕ್ಷ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಹೆಸರಿಗಷ್ಟೇ ಸೀಮಿತವಾಗಿದೆ. ಹೀಗಾಗಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ.

ಬೆಂಗಳೂರು ಉತ್ತರ ವ್ಯಾಪ್ತಿಗೆ ಕೆ.ಆರ್. ಪುರ, ಮಹಾಲಕ್ಷ್ಮೀ ಬಡಾವಣೆ, ಹೆಬ್ಬಾಳ, ಪುಲಕೇಶಿನಗರ, ದಾಸರಹಳ್ಳಿ, ಯಶವಂತಪುರ, ಬ್ಯಾಟರಾಯನಪುರ, ಮಲ್ಲೇಶ್ವರ ಸೇರಿದಂತೆ ಎಂಟು ಕ್ಷೇತ್ರ ಬರುತ್ತವೆ. ಈ ಪೈಕಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐದು ಕ್ಷೇತ್ರ ಹಾಗೂ ಕಾಂಗ್ರೆಸ್‌ ಮೂರು ಕ್ಷೇತ್ರ ಗೆದ್ದಿವೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಇನ್ನೂ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಹಲವು ಹೆಸರುಗಳು ಕೇಳಿ ಬಂದಿದೆಯಾದರೂ ಗೆಲ್ಲಬಲ್ಲ ಅಥವಾ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕದನ: ಬಿಜೆಪಿ ಟಿಕೆಟ್‌ಗೆ ತೇಜಸ್ವಿ, ಜೈಶಂಕರ್ ಪೈಪೋಟಿ?

ಸಚಿವರ ಪೈಕಿ ಕೃಷ್ಣ ಬೈರೇಗೌಡ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಿದರೆ ಹೇಗೆ ಎಂಬ ಚಿಂತನೆಯೊಂದು ಪಕ್ಷದ ನಾಯಕರಲ್ಲಿ ಮೂಡಿತ್ತು. ಆದರೆ, ಬೈರೇಗೌಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರ ಈ ಚಿಂತನೆ ಮರೆಯಾಗಿದೆ.

ಇನ್ನು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಹಳೆ ಕಾಂಗ್ರೆಸ್ಸಿಗ ಎಸ್‌.ಟಿ. ಸೋಮಶೇಖರ್‌ ಹೆಸರಿನ ಪರಿಗಣನೆ ಗಂಭೀರವಾಗಿಯೇ ಇದೆ. ಇತ್ತೀಚೆಗೆ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ಕಾಂಗ್ರೆಸ್‌ ನಾಯಕರೊಂದಿಗೆ ಬೆರೆಯುತ್ತಿರುವ ಸೋಮಶೇಖರ್‌ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿದೆ. ಆದರೆ, ಅವರು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಿಲ್ಲ. ಇನ್ನು ವೈಟ್‌ ಕಾಲರ್‌ ರಾಜಕಾರಣಿ ಎನಿಸಿರುವ ಮಾಜಿ ರಾಜ್ಯ ಸಭಾ ಸದಸ್ಯ ರಾಜೀವ್‌ ಗೌಡ ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಅವರ ಬಗ್ಗೆ ಒಲವು ಅಷ್ಟು ಇಲ್ಲ.

ಇನ್ನು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಅವರ ತಂದೆ ಹನುಮಂತರಾಯಪ್ಪ ಮಾತ್ರ ಪುತ್ರಿ ಲೋಕಸಭೆಯ ಸ್ಪರ್ಧೆ ವಿಚಾರವನ್ನು ಬಹಿರಂಗ ಸಭೆಗಳಲ್ಲೇ ನಿರಾಕರಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಕುತೂಹಲ:

ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಘೋಷಣೆ ಮಾಡಿದ್ದ ಹಾಲಿ ಸಂಸದ ಸದಾನಂದಗೌಡ ಅವರು ಬದಲಾದ ಸನ್ನಿವೇಶದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಸಿದ್ಧ ಅಂತ ಹೇಳಿರುವುದು ಇತರ ಆಕಾಂಕ್ಷಿಗಳಿಗೆ ಸ್ವಲ್ಪ ನಿರಾಸೆಯಾಗಿದೆ. ಆದರೂ ಸದಾನಂದಗೌಡರಿಗೆ ಮತ್ತೊಮ್ಮೆ ಟಿಕೆಟ್ ಸಿಗುವ ಅನುಮಾನವಿದೆ. ಬಿ.ಎಸ್.ಯಡಿಯೂರಪ್ಪ ಅವರು ಪಟ್ಟು ಹಿಡಿದರೆ ಸಾಧ್ಯ ಆಗಬಹುದು. ಅಂತಿಮವಾಗಿ ವರಿಷ್ಠರ ತೀರ್ಮಾನ ಕುತೂಹಲಕರವಾಗಿದೆ. ಒಟ್ಟಿನಲ್ಲಿ ಈ ಕ್ಷೇತ್ರದಿಂದ ಒಕ್ಕಲಿಗ ಸಮುದಾಯದವರಿಗೇ ಟಿಕೆಟ್ ನೀಡಲು ಒಲವು ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆ 2024: ಜಗದೀಶ ಶೆಟ್ಟರ್ ಬೆಳಗಾವಿಯಿಂದ ಅಖಾಡಕ್ಕೆ?, ಟಿಕೆಟ್ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ

ಈ ನಡುವೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರೂ ಪ್ರಸ್ತಾಪವಾಗಿವೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ನಿರೀಕ್ಷೆ ಇರುವುದರಿಂದ ಅಲ್ಲಿನ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ.

ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಸೇರಿದವರಾದರೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಪರಮಾಪ್ತರಾಗಿರುವ ತಮ್ಮೇಶ ಗೌಡ ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!