ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆ ನಡುವೆಯೇ ಖರ್ಗೆ-ಪರಂ ದೀರ್ಘ ಸಭೆ: ಸಸ್ಪೆನ್ಸ್‌ ಭೇಟಿ

Published : Jul 25, 2022, 12:00 AM IST
ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆ ನಡುವೆಯೇ ಖರ್ಗೆ-ಪರಂ ದೀರ್ಘ ಸಭೆ: ಸಸ್ಪೆನ್ಸ್‌ ಭೇಟಿ

ಸಾರಾಂಶ

ಇಬ್ಬರೂ ನಾಯಕರು ಪಕ್ಷದ ವತಿಯಿಂದ ಮಾಡಲಿರುವ ದಲಿತ ಸಮಾವೇಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 

ಬೆಂಗಳೂರು(ಜು.25):  ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಮುಖ್ಯಮಂತ್ರಿ ಹುದ್ದೆ ಹೇಳಿಕೆಗಳ ಭರಾಟೆ ತಾರಕಕ್ಕೇರಿರುವ ಹೊತ್ತಿನಲ್ಲೇ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಭೇಟಿಯಾಗಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿದ ಡಾ.ಜಿ. ಪರಮೇಶ್ವರ್‌ ಅವರು, ಗುರುವಾರ (ಜು.21) ಮುಗಿದಿರುವ ಖರ್ಗೆ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಭೇಟಿಯಾಗಿ ಪ್ರತ್ಯೇಕ ಕೊಠಡಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕುರಿತು ಹೇಳಿಕೆಗಳು ಗರಿಗೆದರಿರುವ ಸಮಯದಲ್ಲಿ ಇಬ್ಬರು ಪ್ರಮುಖ ನಾಯಕರು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಬಿಜೆಪಿ ಇವತ್ತಲ್ಲ ನಾಳೆ ಸೋಲಲಿದೆ, ಅವರೇನು 500 ವರ್ಷ ಅಧಿಕಾರದಲ್ಲಿ ಇರೋದಿಲ್ಲ: ಹರಿಪ್ರಸಾದ್

ಆದರೆ, ಮೂಲಗಳ ಪ್ರಕಾರ ಇಬ್ಬರೂ ನಾಯಕರು ಪಕ್ಷದ ವತಿಯಿಂದ ಮಾಡಲಿರುವ ದಲಿತ ಸಮಾವೇಶಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಲಬುರಗಿ, ಬೆಂಗಳೂರು ಸೇರಿದಂತೆ ವಿವಿದೆಡೆ ನಡೆಯಲಿರುವ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ದಲಿತ ಸಮಾವೇಶಗಳನ್ನು ಯಶಸ್ವಿಗೊಳಿಸಬೇಕು. ಯಾವುದೇ ಸಂದರ್ಭ ಬಂದರೂ ಸಮುದಾಯ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಆಗುವ ಬಗ್ಗೆ ಖರ್ಗೆ ಮಾರ್ಮಿಕ ಉತ್ತರ:

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ನಾನು ಮುಖ್ಯಮಂತ್ರಿ ಆಗುವುದನ್ನು ಹೈಕಮಾಂಡ್‌ಗೆ ಕೇಳಿಕೊಂಡು ಬಂದು ಹೇಳಬೇಕಷ್ಟೇ. ನಮ್ಮ ಹೈಕಮಾಂಡ್‌ ದಿಲ್ಲಿಯಲ್ಲಿದೆಯೇ ಹೊರತು ವಿಜಯಪುರ, ಬೆಳಗಾವಿ, ಮೈಸೂರು, ಬೆಂಗಳೂರು, ಕಲಬರಗಿಯಲ್ಲಿ ಇಲ್ಲ,’ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರ ನೀಡಿದರು.

ಪರಮೇಶ್ವರ್‌ ಭೇಟಿ ಬಗ್ಗೆ ಮಾತನಾಡಿ, ‘ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಹಿತೈಷಿಗಳು, ಅಭಿಮಾನಿಗಳು ಶುಭ ಕೋರಲು ಮನೆಗೆ ಬಂದಿದ್ದಾರೆ ಅಷ್ಟೇ’ ಎಂದರು.

ಸಿಎಂ ಸ್ಥಾನದ ಬಗ್ಗೆ ಚರ್ಚೆ ಅಪ್ರಸ್ತುತ- ಪರಂ:

ಡಾ.ಜಿ.ಪರಮೇಶ್ವರ್‌ ಮಾತನಾಡಿ, ‘ಮೊದಲಿಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಚುನಾವಣೆಯಲ್ಲಿ 113 ಸ್ಥಾನಗಳು ಬಂದ ನಂತರ ಮುಖ್ಯಮಂತ್ರಿ ಸ್ಥಾನ ಬಗ್ಗೆ ಯೋಚಿಸಬೇಕು. ಅಷ್ಟಕ್ಕೂ ಈ ವಿಚಾರವಾಗಿ ಹೈಕಮಾಂಡ್‌ ತೀರ್ಮಾನಿಸಲಿದೆ. ಪಕ್ಷಕ್ಕೆ ಬಹುಮತ ಬಂದ ಬಳಿಕ ಹೈಕಮಾಂಡ್‌ ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುವ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ. ನಂತರ ಹೈಕಮಾಂಡ್‌ಗೆ ಮಾಹಿತಿ ರವಾನೆಯಾಗಲಿದೆ. ಆನಂತರವಷ್ಟೇ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುವುದು ಈವರೆಗೆ ನಡೆದುಬಂದಿದೆ. ಹೀಗಾಗಿ ಈ ಬಗ್ಗೆ ಚರ್ಚೆ ಅಪ್ರಸ್ತುತ’’ ಎಂದು ತಿಳಿಸಿದರು.

ಡಿಕೆಶಿ-ಸಿದ್ದು ಗುದ್ದಾಟದ ಮಧ್ಯೆ ಕಾಂಗ್ರೆಸ್‌ನಿಂದ ಸಿಎಂ ರೇಸ್‌ಗೆ ಲಿಂಗಾಯತ ಪ್ರಭಾವಿ ನಾಯಕ ಎಂಟ್ರಿ

ಡಿಕೆಶಿ ಹೇಳಿಕೆಗೆ ಸಮರ್ಥನೆ:

ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ಬಾಯಿ ಮುಚ್ಚಿಕೊಂಡು ಕೆಲಸ ಮಾಡುವಂತೆ ನೀಡಿರುವ ಹೇಳಿಕೆ ಸಮರ್ಥಿಸಿದ ಪರಮೇಶ್ವರ್‌, ‘ಕೆಪಿಸಿಸಿ ಅಧ್ಯಕ್ಷರಾಗಿ ಅವರು ಆ ರೀತಿಯ ಮಾತನ್ನು ಹೇಳಲೇಬೇಕು. ನಾನು ಸಹ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಈ ವೇಳೆ ನಾನು ಅಷ್ಟುಕಟುವಾಗಿ ಹೇಳದಿದ್ದರೂ ನನ್ನದೇ ಆದ ರೀತಿಯಲ್ಲಿ ಪಕ್ಷದ ಕೆಲಸ ಮಾಡಿ ಎನ್ನುತ್ತಿದ್ದೆ. ಅದರಲ್ಲಿ ತಪ್ಪೇನಿಲ್ಲ’ ಎಂದರು.

ಒಕ್ಕಲಿಗರ ಓಲೈಕೆ ತಪ್ಪಲ್ಲ: ಪರಂ

ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮುದಾಯವನ್ನು ಓಲೈಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ‘‘ಒಕ್ಕಲಿಗ ಸಮುದಾಯದ ಓಲೈಕೆ ತಪ್ಪೇನಿಲ್ಲ. ಸಮುದಾಯದ ಮುಂದೆ ಆ ರೀತಿ ಕೇಳಬಾರದು ಎನ್ನಲಾಗುವುದೇ? ಆ ಸಮುದಾಯ ಆಸೆಪಟ್ಟರೆ ಬೇಡ ಎನ್ನಲು ನಾವು ಯಾರು? ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಹೋಗಲಿದ್ದು, ಒಟ್ಟಿಗೆ ಹೋಗುವ ಇಚ್ಛಾಶಕ್ತಿ ಎಲ್ಲರಲ್ಲೂ ಇರಬೇಕು,’’ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌