ದಾವಣಗೆರೆ (ಅ.4) : ಎಐಸಿಸಿ ನಾಯಕ ರಾಹುಲ್ ಗಾಂಧಿ ಸಾರಥ್ಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಅ.7ರಂದು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮುಖಂಡರು, ಕಾರ್ಯಕರ್ತೆಯರು, ಪದಾಧಿಕಾರಿಗಳು ಪಾಲ್ಗೊಳ್ಳಲು ಯಾತ್ರೆಯ ಸಹ ಸಂಚಾಲಕಿ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ಕರೆ ನೀಡಿದರು.
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ: ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ Rahul Gandhi ಭೇಟಿಯ ಫೋಟೋಗಳನ್ನು ನೋಡಿ..
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಅ.7ರಿಂದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಾಗಮಂಗಲದಲ್ಲಿ ಸೇರ್ಪಡೆಯಾಗಲಿದ್ದು, ರಾಹುಲ್-ಪ್ರಿಯಾಂಕಾ ಗಾಂಧಿ ನೇತೃತ್ವದ ಪಾದಯಾತ್ರೆ ಯಶಸ್ವಿಗೊಳಿಸಲು ಮಹಿಳೆಯರು ಪಾಲ್ಗೊಳ್ಳಬೇಕು ಎಂದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲಾ ಜಾತಿ, ಧರ್ಮ, ವರ್ಗಗಳ ಹಿತ ಕಾಯುತ್ತಾ ಬಂದ ಪಕ್ಷವಾಗಿದೆ. ಮಹಿಳೆಯರಿಗೆ ಹೆಚ್ಚು ಸ್ಥಾನಮಾನ, ಅವಕಾಶಗಳನ್ನು ನೀಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಿ ಪುರುಷರಿಗೆ ಸಮಾನ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಎಂದು ತಿಳಿಸಿದರು.
ಮಹಿಳೆಯರಿಗೆ ಪ್ರೋತ್ಸಾಹ:
ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಶಿಕ್ಷಣ, ಉದ್ಯೋಗ, ಉದ್ಯಮಿಗಳಾಗಲು ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಾ ಬಂದರು. ಅಷ್ಟೇ ಅಲ್ಲ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿ ಅಧಿಕಾರ ನಡೆಸಲು ಅನುವು ಮಾಡಿದರು. ಅದೇ ಇಂದಿರಾ ಗಾಂಧಿಯವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳಾ ವಿರೋಧಿ ಬಿಜೆಪಿ ಸರ್ಕಾರಗಳ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಮಹಿಳಾ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕಾಂಗ್ರೆಸ್ ಪಕ್ಷದ ಪ್ರೋತ್ಸಾಹ ಕಾರಣವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಸೇರಿ ರಾಜ್ಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆಗೆ ವೀಣಾ ಕಾಶೆಪ್ಪನವರ್ ಮನವಿ ಮಾಡಿದರು.
ರಾಹುಲ್ ಗಾಂಧಿಯನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ರಾವ್ ಮಾತನಾಡಿ, ಅ.7ರಂದು ನಾಗಮಂಗಲದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿ ನಾಯಕರ ಜೊತೆಗೆ ದಾವಣಗೆರೆ ಜಿಲ್ಲೆಯಿಂದಲೂ ತೆರಳುವ ಸಾವಿರಾರು ಮಹಿಳೆಯರು ಹೆಜ್ಜೆ ಹಾಕಲಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಸುಷ್ಮಾ ಪಾಟೀಲ್, ಆಶಾ ಮುರಳಿ ಇತರರು ಇದ್ದರು.