
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಸೆ.25): ಸರ್ಕಾರ ಒಂದೆಡೆ ತಾನು ಘೋಷಿಸಿಕೊಂಡ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಹೊಂದಿಸಲು ಹರಸಾಹಸ ಪಟ್ಟು ಇತ್ತ ಎಸ್ಸಿ ಎಸ್ಟಿ ಅನುದಾನವನ್ನ ಬಳಸಿಕೊಂಡಿದ್ದು, ಇದೀಗ ರಾಜ್ಯ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗಿದೆ. ಈ ನಡುವೆ ಲೋಕಸಭಾ ಚುನಾವಣೆಗೂ ಮುನ್ನ ನಿರಂತರ 3 ತಿಂಗಳು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾದಿಗ ಮಹಾಸಭಾ ಅಭಿಯಾನಕ್ಕೆ ಮುಂದಾಗಿದೆ, ಈ ಕುರಿತ ವರದಿ ಇಲ್ಲಿದೆ.
ಹೌದು, ಒಂದೆಡೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಎಸ್ಸಿ ಎಸ್ಟಿ ಅನುದಾನ ಬಳಸಿಕೊಂಡಿರೋ ರಾಜ್ಯ ಸರ್ಕಾರ, ಮತ್ತೊಂದೆಡೆ ಎಸ್ಸಿ ಎಸ್ಟಿ ಅನುದಾನ ಬಳಕೆ ವಿರುದ್ದ ಬೀದಿಗಿಳಿಯಲು ಸಜ್ಜಾದ ಮಾದಿಗ ಮಹಾಸಭಾ, ಇವುಗಳ ಮಧ್ಯೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೈ ಸರ್ಕಾರಕ್ಕೆ ಎದುರಾಯ್ತು ನಿಲ್ಲದ ಸಂಕಷ್ಟ. ಅಂದಹಾಗೆ ಇಂತಹವೊಂದು ಅಭಿಯಾನಕ್ಕೆ ಕರೆ ಕೊಟ್ಟಿದ್ದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣಗಳಲ್ಲೊಂದಾಗಿರೋ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದವರಿಗಾಗಿ ಇರಿಸಿದ್ದ 11 ಸಾವಿರ ಕೋಟಿಗೂ ಅಧಿಕ ಹಣವನ್ನ ಇದೀಗ ಬಳಸಿಕೊಂಡಿರೋದು ರಾಜ್ಯ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗಿದೆ.
ಮುಸ್ಲಿಮರು ಮತ ಹಾಕಿಲ್ಲವೆಂದು ಎಚ್‌ಡಿಕೆ ಎದೆಮುಟ್ಟಿ ಹೇಳ್ತಾರಾ?: ಸಚಿವ ಜಮೀರ್
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ತಿಂಗಳ ಕಾಲ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಅಭಿಯಾನಯೊಂದನ್ನು ಆರಂಭಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಜಿಲ್ಲೆಗಳಲ್ಲೂ ಕೂಡ ಜಾಗೃತಿ ಕಾರ್ಯ ಮುಂದುವರೆದಿದ್ದು, ಲೋಕಸಭಾ ಚುನಾವಣೆ ಹತ್ತಿರವಾಗುವ ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಅಭಿಯಾನ ನಡೆಸಲು ಮುಂದಾಗಿದ್ದು, ಅಭಿಯಾನದ ಸಮಾರೋಪವನ್ನ ಮಾದಿಗ ಮಹಾಸಭಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿದೆ. ಈ ನಡುವೆ ಜಾಗೃತಿ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮತ ಚಲಾಯಿಸುವಂತೆ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲ್ಸ ನಡೆಯಲಿದೆ ಅಂತಾರೆ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ.
ಮಾತನಾಡದ ಕೈ ನಾಯಕರ ವಿರುದ್ಧ ಅಸಮಾಧಾನ: ರಾಜ್ಯದಲ್ಲಿ 36 ಲಕ್ಷ ಜನ ಸಮುದಾಯದವರಿದ್ದು, ಇವರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಈ ಹಿಂದೆಯೂ ಸಹ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲೂ ಸಮುದಾಯದ ನಿರ್ಣಯಗಳು ಸರ್ಕಾರದ ಏಳುಬೀಳುಗಳಿಗೆ ಕಾರಣವಾಗಿರೋ ಉದಾಹರಣೆಗಳಿವೆ. ಈ ನಡುವೆ ರಾಜ್ಯದಲ್ಲಿ ಪರಿಶಿಷ್ಟರ ಏಳಿಗೆ ಆಗಬೇಕಿದ್ದು, ಅದಕ್ಕಾಗಿ ಅನುದಾನದ ಅಗತ್ಯತೆ ಇದೆ. ಹೀಗಿರುವಾಗ ಎಸ್ಸಿ ಎಸ್ಟಿ ಸಮುದಾಯದ ಹಣವನ್ನ ಬಳಸಿಕೊಂಡಿರೋದು ಅಭಿವೃದ್ದಿಗೆ ಹಿನ್ನಡೆಯಾದಂತಾಗುತ್ತೆ.
ಬಿಎಸ್‌ವೈ ಭೇಟಿಯಾಗಿ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ: ಮಹತ್ವದ ಮಾತುಕತೆ
ಮೇಲಾಗಿ ಕಾಂಗ್ರೆಸ್ ಪಕ್ಷದಲ್ಲಿರೋ ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಪ್ರಿಯಾಂಕ ಖರ್ಗೆ, ಆರ್.ಬಿ. ತಿಮ್ಮಾಪೂರ, ಸತೀಶ ಜಾರಕಿಹೊಳಿ ಅವರಂತ ಬುದ್ದಿಜೀವಗಳಿದ್ದು, ಇದರ ಬಗ್ಗೆ ವಿರೋಧ ಮಾಡದೇ ಇರೋದನ್ನ ನೋಡಿದ್ರೆ ಇವ್ರು ಸಹ ಎಸ್ಸಿ ಎಸ್ಟಿ ಸಮುದಾಯಕ್ಕೆ ವಂಚಿಸಲಿಕ್ಕೆ ಸಹಕಾರ ಕೊಟ್ಟಂತಾಗುತ್ತೇ ಅನ್ನೋದು ಮಾದಿಗ ಮಹಾಸಭಾದ ಅಭಿಮತ. ಕೂಡಲೇ ಸರ್ಕಾರ ಎಸ್ಸಿ ಎಸ್ಟಿ ಅನುದಾನವನ್ನ ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ಎಫೆಕ್ಟ್ ಆಗೋದು ಫಿಕ್ಸ್ ಅಂತಾರೆ ಮುಖಂಡರಾದ ಶಿವಾನಂದ ಟವಳಿ. ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಮಾದಿಗ ಮಹಾಸಭಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಅಭಿಯಾನಕ್ಕೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೇ ಅಂತ ಕಾಯ್ದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.