ರಾಜ್ಯಪಾಲಗೆ ಬಿಜೆಪಿ ಪತ್ರ: ಸಿಎಂ ಕಮಲ್‌ನಾಥ್‌ಗೆ ಹೊಸ ಸಂಕಷ್ಟ!

By Kannadaprabha NewsFirst Published Mar 15, 2020, 12:34 PM IST
Highlights

 ಸಿಎಂ ಕಮಲ್‌ನಾಥ್‌ಗೆ ಹೊಸ ಸಂಕಷ್ಟ!| ಇಂದೇ ಕಮಲ್‌ಗೆ ವಿಶ್ವಾಸ ಮತಕ್ಕೆ ಸೂಚಿಸಿ: ರಾಜ್ಯಪಾಲಗೆ ಬಿಜೆಪಿ ಪತ್ರ| ಕಮಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಲ್ಪಮತಕ್ಕೆ ಕುಸಿತ

ಭೋಪಾಲ್‌[ಮಾ.15]: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಮಧ್ಯಪ್ರದೇಶ ಬಿಜೆಪಿ ಘಟಕದ ವಿರುದ್ಧ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ರಾಜ್ಯಪಾಲ ಲಾಲ್‌ ಜೀ ಟಂಡನ್‌ ಅವರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ, ಅಲ್ಪ ಮತಕ್ಕೆ ಕುಸಿದಿರುವ ಕಮಲ್‌ ಸರ್ಕಾರದ ವಿಶ್ವಾಸ ಮತ ಸಾಬೀತಿಗೆ ಸೂಚಿಸಬೇಕೆಂದು ಕೋರಿ ರಾಜ್ಯಪಾಲರಿಗೆ ಬಿಜೆಪಿ ನಿವೇದನಾ ಪತ್ರ ಸಲ್ಲಿಕೆ ಮಾಡಿದೆ.

ಹೀಗಾಗಿ, ಕಾಂಗ್ರೆಸ್‌ ಶಾಸಕರ ರಾಜೀನಾಮೆಯಿಂದ ಎದುರಾಗಿರುವ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಮಜಲಿಗೆ ತಿರುಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ‘ಜ್ಯೋತಿರಾಧಿತ್ಯ ಸಿಂಧಿಯಾ, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆ ಬಳಿಕ 22 ಕಾಂಗ್ರೆಸ್‌ ಸದಸ್ಯರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತನ್ಮೂಲಕ ಕಮಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ, ಕಮಲ್‌ನಾಥ್‌ ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಕಳೆದುಕೊಂಡಿದ್ದಾರೆ. ಈ ನಡುವೆ, ಸೋಮವಾರದಿಂದ ರಾಜ್ಯ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ರಾಜ್ಯಪಾಲರಿಂದ ನಿಯೋಜಿತರಾದ ಮೇಲ್ವಿಚಾರಕರ ಅಡಿಯಲ್ಲಿ ಕಮಲ್‌ ಸರ್ಕಾರ ಬಹುಮತ ಸಾಬೀತುಪಡಿಸಬೇಕು. ಅಲ್ಲದೆ, ಈ ಕುರಿತು ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.

click me!