ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿರುವ ವೀರಪ್ಪ ಮೊಯ್ಲಿ ಚುನಾವಣೆಗೂ ಮುನ್ನವೇ ಟಿಕೆಟ್‌ಗಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವುದರಿಂದ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರೂ ಇರುವುದರಿಂದ ಜೆಡಿಎಸ್ ಈ ಕ್ಷೇತ್ರಕ್ಕೆ ಪಟ್ಟು ಹಿಡಿವ ಸಂಭವವಿದೆ. ಅದನ್ನು ತಪ್ಪಿಸಲು ಶತಾಯಗತಾಯ ಮೊಯ್ಲಿ ಪ್ರಯತ್ನಿಸುತ್ತಿದ್ದಾರೆ. ತಳಮಟ್ಟದಲ್ಲಿ ಕಾಂಗ್ರೆಸ್- ಜೆಡಿಎಸ್ ವೈರಿಗಳಂತಿರುವುದರಿಂದ ಮೈತ್ರಿ ಏರ್ಪಟ್ಟರೂ ಮತಗಳ ವರ್ಗಾವಣೆ ಎಷ್ಟರ ಮಟ್ಟಿಗೆ ಆಗಲಿದೆ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಈ ಬಗ್ಗೆ ಇಂದಿನ ವಿಶ್ಲೇಷಣೆ.
ಮಹಾಭಾರತ ಸಂಗ್ರಾಮ: ಚಿಕ್ಕಬಳ್ಳಾಪುರ ಕ್ಷೇತ್ರ
ಚಿಕ್ಕಬಳ್ಳಾಪುರ[ಫೆ.04]: ಮೂರು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಆರಂಭದಿಂದಲೂ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡಿಲ್ಲ. ಹಾಗಂತ ಪದೇಪದೇ ಸಂಸದರನ್ನೂ ಬದಲಿಸುವುದೂ ಇಲ್ಲ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೇ ಹೆಚ್ಚಿನ ಪ್ರಾಮುಖ್ಯತೆ.
ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಪರಾಜಿತರಾಗಿದ್ದ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಅವರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮತ್ತು ಸ್ಥಾನ ಹಂಚಿಕೆ ಇನ್ನೂ ಅಂತಿಮವಾಗದ ಕಾರಣ ಪರಿಸ್ಥಿತಿ ಡೋಲಾಯಮಾ ನವಾಗಿದೆ. ಮೈತ್ರಿ ಏರ್ಪಟ್ಟರೂ ತಾವೇ ಅಭ್ಯರ್ಥಿ ಎಂಬ ವಿಶ್ವಾಸವನ್ನು ಹಾಲಿ ಸಂಸದ ವೀರಪ್ಪ ಮೊಯ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?
ಹಾಲಿ ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂಬ ಒತ್ತಾಯವನ್ನು ಪಕ್ಷದ ಹೈಕಮಾಂಡ್‌ಗೆ ತಲುಪಿಸಲು ಇದೇ ವೀರಪ್ಪ ಮೊಯ್ಲಿ ಅವರೇ ನೇತೃತ್ವ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಸೋಲುಂಡಿ ರುವ ಕ್ಷೇತ್ರಗಳನ್ನು ಬೇಕಾದರೆ ಬಿಟ್ಟುಕೊಡಬಹುದು. ಆದರೆ, ಗೆದ್ದ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡ ಬಾರದು ಎಂಬ ವಾದವನ್ನು ಮೊಯ್ಲಿ ಸೇರಿದಂತೆ ಕಾಂಗ್ರೆಸ್ಸಿನ ಹಲವು ಸಂಸದರು ಪ್ರಬಲವಾಗಿ ಮಂಡಿಸಿದ್ದಾರೆ.
ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್ ವಿವೇಕರಾವ್?
ಮೊಯ್ಲಿ ಟೀಕಿಸಿದ್ದ ಜೆಡಿಎಸ್‌ಗೆ ಇಕ್ಕಟ್ಟು
ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಉಳಿದುಕೊಳ್ಳಲಿದೆ ಎಂಬ ನಿರೀಕ್ಷೆ ಇದ್ದರೂ ಜೆಡಿಎಸ್ ಕೂಡ ಈ ಕ್ಷೇತ್ರದ ಮೇಲಿನ ಹಿಡಿತಕ್ಕಾಗಿ ಪ್ರಯತ್ನ ಮುಂದು ವರೆಸಿದೆ. ಕಳೆದ 10 ವರ್ಷಗಳಿಂದ ನಿರಂತರವಾಗಿ ಮೊಯ್ಲಿ ಅವರ ವಿರುದ್ಧ ನೇರವಾಗಿಯೇ ಹಲವಾರು ಆರೋಪ ಮಾಡಿಕೊಂಡು ಬಂದಿರುವ ಜೆಡಿಎಸ್ ಮುಖಂಡರು, ಮೈತ್ರಿ ಅಭ್ಯರ್ಥಿಯಾಗಿ ಮೊಯ್ಲಿ ಅವರನ್ನು ಆಯ್ಕೆ ಮಾಡಿದರೆ ಅದೇ ವ್ಯಕ್ತಿ ಪರ ಮತ ಕೇಳುವುದು ಹೇಗೆ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿಯೇ ಕ್ಷೇತ್ರವನ್ನು ಶತಾಯಗತಾಯ ಜೆಡಿಎಸ್ ಉಳಿಸಿಕೊಳ್ಳಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರತೊಡಗಿದ್ದಾರೆ ಎನ್ನಲಾಗಿದೆ.
ದೇವೇಗೌಡ ಅಭ್ಯರ್ಥಿ ಆಗ್ತಾರಾ?
ಕಳೆದ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕಾರಣ ಪ್ರಸ್ತುತ ಚುನಾವಣೆಯಲ್ಲಿ ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನೇ ಕರೆ ತಂದು ಜೆಡಿಎಸ್ ಅಭ್ಯರ್ಥಿ ಮಾಡಬೇಕು ಎಂಬ ಪ್ರತಿ ವಾದ ಜೆಡಿಎಸ್ ಪಾಳೆಯದಿಂದ ಕೇಳಿಬರುತ್ತಿದೆ. ದೇವೇ ಗೌಡರನ್ನು ಕಣಕ್ಕಿಳಿಸಿದಲ್ಲಿ ತಾವು ಗೆಲ್ಲಿಸಿಕೊಂಡು ಬರುವುದಾಗಿ ಜೆಡಿಎಸ್ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಮೈತ್ರಿ ಇನ್ನೂ ಮಾತುಕತೆ ಹಂತದಲ್ಲಿಯೇ ಇರುವುದರಿಂದ ಅದು ಅಂತಿಮವಾಗದೆ ಇಲ್ಲಿನ ಅಭ್ಯರ್ಥಿ ಗೊಂದಲ ಉಭಯ ಪಕ್ಷಗಳಲ್ಲಿ ಪರಿಹಾರ ಕಾಣುವ ಲಕ್ಷಣಗಳಿಲ್ಲ.
ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?
3ನೇ ಸ್ಥಾನಕ್ಕೆ ಜಾರಿದ್ದ ಎಚ್‌ಡಿಕೆ
ಕರಾವಳಿಯಲ್ಲಿ ಪರಾಭವಗೊಂಡು ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದ ವೀರಪ್ಪ ಮೊಯ್ಲಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಕ್ಷೇತ್ರ. 2009ರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರು ಸಂಸದರಾಗಿ ಆಯ್ಕೆಯಾಗಿ ಯುಪಿಎ-2ರಲ್ಲಿ ಪ್ರಭಾವಿ ಸಚಿವರಾಗಿದ್ದರು. ನಂತರ 2014ರ ಚುನಾವಣೆಯಲ್ಲಿಯೂ ಪುನರಾಯ್ಕೆ ಆಗಿದ್ದಾರೆ
2014ರ ಲೋಕಸಭಾ ಚುನಾವಣೆ ವೇಳೆ ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವ ಮೂಲಕ ಕ್ಷೇತ್ರದ ರಾಜಕಾರಣಕ್ಕೆ ಮೆರಗು ನೀಡಿದ್ದರು. ಆಗಲೂ ಕಾಂಗ್ರೆಸ್‌ನಿಂದ ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಸ್ಪರ್ಧಿಸಿದ್ದರು. ಎಚ್.ಡಿ.ಕುಮಾರ ಸ್ವಾಮಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಬಚ್ಚೇಗೌಡ ಎದುರು ಕೇವಲ 13 ಸಾವಿರ ಮತಗಳ ಅಂತರದಿಂದ ವೀರಪ್ಪ ಮೊಯ್ಲಿ ನಾಯಿತರಾಗಿದ್ದರು.
ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?
ಮೊಯ್ಲಿಗೆ ಜೆಡಿಎಸ್ ಬೆಂಬಲ ಸಿಗುತ್ತಾ?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆಯಾದರೂ ಈ ಹಿಂದೆ ಜನತಾದಳದಿಂದ ಆರ್.ಎಲ್. ಜಾಲಪ್ಪ ಗೆಲವು ಸಾಧಿಸಿದ್ದಾರೆ. ಇನ್ನು ಪ್ರತಿ ಬಾರಿಯೂ ಕಾಂಗ್ರೆಸ್‌ಗೆ ಸಮಾನವಾಗಿ ಮತ ಪಡೆಯುವಲ್ಲಿ ಯಶಸ್ವಿಯಾಗುತ್ತಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ಹಾಗಾಗಿ ಪ್ರಸ್ತುತ ಮೊಯ್ಲಿಗೆ ಕ್ಷೇತ್ರದಲ್ಲಿ ಗೆಲುವು ಅಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ. ಇನ್ನು ಮೊಯ್ಲಿ ಅವರ ಬಗ್ಗೆ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಜೆಡಿಎಸ್ ಮುಖಂಡರು ಅವರ ಪರ ಇರುತ್ತಾರೆ ಎಂಬುದು ಅನುಮಾನ. ಅಲ್ಲದೆ ಕ್ಷೇತವನ್ನು ಜೆಡಿಎಸ್‌ಗೇ ಪಡೆಯುವಂತೆ ವರಷ್ಠರ ಮೇಲೆ ಒತ್ತಡ ಹೇರುತ್ತಿರುವ ಜೆಡಿಎಸ್ ನಾಯಕರು ಅಂತಿಮವಾಗಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಾರೆಯೇ ಎಂಬ ಅನುಮಾನವೂ ಕಾಡದೇ ಇಲ್ಲ.
ಮೈತ್ರಿ ಏರ್ಪಟ್ಟರೂ ಜೆಡಿಎಸ್ ಸ್ಪರ್ಧೆ?
ಪ್ರಸ್ತುತ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿರುವ ಕಾರಣ ಆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ನಿಂದ ವೀರಪ್ಪ ಮೊಯ್ಲಿ ಅವರು ತಾವೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಹಾಗಾಗಿ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಮತ್ತು ಹಾಲಿ ಸಂಸದ ವೀರಪ್ಪಮೊಯ್ಲಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಆದರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇರುತ್ತಾರೆ ಎಂಬುದು ಮತ್ತೊಂದು ವಾದವಾಗಿದೆ.
ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್ ಎದುರು ಬಿಜೆಪಿ ಸ್ಪರ್ಧಿ ಯಾರು..?
ಇದಕ್ಕೆ ಪ್ರಮುಖ ಕಾರಣ ಕ್ಷೇತ್ರದಲ್ಲಿ ಹೆಚ್ಚಾಗಿರುವ ಒಕ್ಕಲಿಗರ ಮತಗಳು ಬಿಜೆಪಿ ಪರ ವಾಲುವುದನ್ನು ತಪ್ಪಿಸಲು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂಬ ಮಾತು ಗಳೂ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಒಕ್ಕಲಿಗ ಅಭ್ಯರ್ಥಿಯೊಬ್ಬರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದರೆ, ಒಕ್ಕಲಿಗ ಮತಗಳು ಬಿಜೆಪಿಗೆ ಹೋಗುವುದನ್ನು ತಪ್ಪಿಸಬಹುದು ಎಂಬುದು ಲೆಕ್ಕಾಚಾರವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿಯೂ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಸ್ಪರ್ಧಿಸದಿದ್ದರೆ ಅತಿ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲ್ಲುತ್ತಿತ್ತು ಎಂಬುದು ಲೆಕ್ಕಾಚಾರ. ಹಾಗಾಗಿ ಅದೇ ತಂತ್ರವನ್ನು ಪ್ರಸ್ತುತ ಚುನಾವಣೆಯಲ್ಲಿಯೂ ಮುಂದುವರಿಸಲು ಉಭಯ ಪಕ್ಷಗಳಲ್ಲೂ ಒಳ ಒಪ್ಪಂದ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೈಸೂರು: ಬಿಜೆಪಿಯಿಂದ ಸಿಂಹ, ಕೈ-ದಳದಿಂದ ಯಾರು?
ಎಂಟರ ಪೈಕಿ 1 ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕ
ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ಒಂದು ವಿಧಾನ ಸಭಾ ಕ್ಷೇತ್ರವನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಹೊಸ ಕೋಟೆ, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ದೇವನಹಳ್ಳಿ, ನೆಲಮಂಗಲದಲ್ಲಿ ಜೆಡಿಎಸ್, ಯಲಹಂಕದಲ್ಲಿ ಬಿಜೆಪಿ ಶಾಸಕ ಇದ್ದಾರೆ.
ಯಾರ‌್ಯಾರು ಪೈಪೋಟಿ?
ಕಾಂಗ್ರೆಸ್: ವೀರಪ್ಪ ಮೊಯ್ಲಿ
ಬಿಜೆಪಿ: ಬಚ್ಚೇಗೌಡ
ಜೆಡಿಎಸ್: ಎಚ್.ಡಿ. ದೇವೇಗೌಡ
ಲೋಕಸಭಾ ಚುನಾವಣೆ: ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ ಬಾಗಲಕೋಟೆ
ಸತತ 4 ಬಾರಿ ಗೆದ್ದಿದ್ದರು ಜಾಲಪ್ಪ
ಈ ಹಿಂದೆ 3 ಬಾರಿ ಗೆಲ್ಲುವ ಮೂಲಕ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ. ಕೃಷ್ಣರಾವ್ ದಾಖಲೆ ಮಾಡಿದ್ದರು. ಆದರೆ ಈ ದಾಖಲೆ ಮುರಿದು ಸತತ 4 ಸಲ ಸಂಸದ ರಾದ ಖ್ಯಾತಿ ಆರ್. ಎಲ್.ಜಾಲಪ್ಪ ಅವರಿಗೆ ಸಲ್ಲುತ್ತದೆ. 1996ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಆಯ್ಕೆಯಾಗುವ ಜೊತೆಗೆ ಅಂದಿನ ಪ್ರಧಾನಿ ದೇವೇಗೌಡ ಅವರ ಸಂಪುಟದಲ್ಲಿ ಸಚಿವರಾ ಗಿಯೂ ಜಾಲಪ್ಪ ಸೇವೆ ಸಲ್ಲಿಸಿದ್ದಾರೆ. ನಂತರ ಜನತಾದಳ ಇಬ್ಭಾಗವಾದಾಗ ಕಾಂಗ್ರೆಸ್ ಸೇರಿದ ಜಾಲಪ್ಪ 3 ಬಾರಿ ಇದೇ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿಯಲ್ಲಿ ವೀರಪ್ಪ ಮೊಯ್ಲಿ ಅವರೂ ಯುಪಿಎ-2 ಸರ್ಕಾರದಲ್ಲಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದರು.
-ಅಶ್ವತ್ಥನಾರಾಯಣ ಎಲ್