
ಬೆಂಗಳೂರು (ಏ.23): ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಕಳುಹಿಸಿಕೊಟ್ಟಿರುವುದಕ್ಕೆ ಪ್ರತಿಯಾಗಿ ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದರು. ಶಿವಾಜಿನಗರದ ಚಾಂದನಿ ಚೌಕ್‌ನಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ. ಸಂವಿಧಾನ ಉಳಿಸುವ, ಮಾನವೀಯತೆ ಉಳಿಸುವ, ನಮ್ಮ ಮಕ್ಕಳು, ಯುವ ಜನತೆಯ ಭವಿಷ್ಯವನ್ನು ಉತ್ತಮಗೊಳಿಸುವ ಚುನಾವಣೆಯಾಗಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ಕೂಡಲೇ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರು. ಗ್ಯಾರಂಟಿ, ಉದ್ಯೋಗ ಸೃಷ್ಟಿ, ಆರೋಗ್ಯ ವಿಮೆ ಸೇರಿದಂತೆ ಸರ್ವ ವರ್ಗಗಳ ಏಳಿಗೆಗೆ ಕಾರಣವಾಗುವ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ ಎಂದರು.
ಮತ್ತೊಂದೆಡೆ, ಬಿಜೆಪಿ ಸರ್ಕಾರ ನಮ್ಮ ದೇಶದ ಸಂವಿಧಾನ ಅಳಿಸಲು ಯೋಜಿಸುತ್ತಿದೆ. ಬಿಜೆಪಿಯ ಅನೇಕ ನಾಯಕರು ಸಂವಿಧಾನ ಅಳಿಸುವ ಮಾತನಾಡುತ್ತಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಸುರ್ಜೇವಾಲಾ ಹೇಳಿದರು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ದ್ರೋಹ ಮಾಡಿಕೊಂಡು ಬಂದಿದೆ. ಬೆಂಗಳೂರಿಗೆ ಫೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ರಾಜ್ಯದ ನ್ಯಾಯಯುತ ತೆರಿಗೆ ಪಾಲು ನೀಡಿಲ್ಲ. ಬರ ಪರಿಹಾರ ಹಣ, ಭದ್ರ ಯೋಜನೆಗೆ ಅನುದಾನ, ಯುವಕರಿಗೆ ಉದ್ಯೋಗ ನೀಡದೆ ರಾಜ್ಯದ ಜನರಿಗೆ ಖಾಲಿ ಚೊಂಬು ನೀಡಿ ವಂಚಿಸಿದೆ ಎಂದು ಅವರು ಕಿಡಿ ಕಾರಿದರು.
1 ಲಕ್ಷ ಮತಗಳ ಅಂತರದ ಗೆಲುವು: ಮನ್ಸೂರ್ ಅಲಿ ಖಾನ್ ಅವರು ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 10 ತಿಂಗಳ ಆಡಳಿತದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ನುಡಿದಂತೆ ನಡೆದಿದೆ. ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಆದರೆ, 10 ವರ್ಷಗಳ ಕಾಲ ಅಧಿಕಾರ ನಡೆಸಿರುವ ಬಿಜೆಪಿ ಬರೀ ಭ್ರಷ್ಟಾಚಾರ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಪ್ರಧಾನಿ ಮೋದಿ ಹೇಳುವ ಸುಳ್ಳುಗಳಿಗೆ ಆಸ್ಕರ್ ಅವಾರ್ಡ್ ನೀಡಬೇಕು ಎಂದು ವ್ಯಂಗ್ಯವಾಡಿದರು. ಸಮಾವೇಶದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರಿಸ್, ನಸೀರ್ ಅಹ್ಮದ್, ಮಾಜಿ ಸಚಿವ ರೆಹಮಾನ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸರ್ಕಾರದಿಂದ ಮಾತ್ರವೇ ಜನರ ಸಮಸ್ಯೆಗೆ ಪರಿಹಾರ: ಸೌಮ್ಯಾರೆಡ್ಡಿ
ಚರ್ಚ್ ಗುರುಗಳ ಭೇಟಿ: ಇಂದಿರಾ ನಗರದ ಫುಲ್ ಗಾಸ್ಪೆಲ್ ಅಸೆಂಬ್ಲಿ ಆಫ್ ಗಾಡ್ ಚರ್ಚ್‌ನ ಪ್ರಧಾನ ಗುರು ಪಾಲ್ ತಂಗಯ್ಯ ಅವರನ್ನು ಭೇಟಿ ಮಾಡಿದ ಮನ್ಸೂರ್ ಅಲಿ ಖಾನ್ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು. ಎಸ್.ಆರ್. ನಗರದ ದೇವಾಂಗ ಭವನದಲ್ಲಿ ದೇವಾಂಗ ಮತ್ತು ನೇಕಾರ ಸಮಾಜದ ಮುಖಂಡರ ಸಭೆ ನಡೆಸಿ ಬೆಂಬಲ ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.