'ಹಿಂದೂ ವಿರೋಧಿ ಕಾಗೇರಿ': ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕಾಗೇರಿ ಟ್ರೋಲ್!

By Ravi JanekalFirst Published Mar 25, 2024, 6:25 PM IST
Highlights

ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್.  'ಹಿಂದೂ ವಿರೋಧಿ ಕಾಗೇರಿ' ಎಂದು ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಮಾಡುತ್ತಿರುವವರು ಅನಂತಕುಮಾರ ಹೆಗಡೆ ಬೆಂಬಲಿಗರ? ಅಥವಾ ಇದನ್ನೇ ಅವಕಾಶವಾಗಿ ಬಳಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರೇ ಟ್ರೋಲ್ ಮಾಡುತ್ತಿದ್ದಾರಾ?

ಉತ್ತರಕನ್ನಡ, ಕಾರವಾರ (ಮಾ.25): ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಕಣಕ್ಕೆ ಇಳಿಸಿದೆ. ಇನ್ನು ಅನಿರೀಕ್ಷಿತವಾಗಿ ಟಿಕೆಟ್ ಸಿಕ್ಕ ಖುಷಿಯಲ್ಲಿ ಕಾಗೇರಿಗೆ ತುಂಬಾ ಸಂತೋಷವಾಗಿದೆ. ನಿನ್ನೆಯಷ್ಟೇ ತಾಯಿ ಅಶೀರ್ವಾದ ಪಡೆದು ಕುಟುಂಬದವರಿಗೆ ಸಿಹಿ ಹಂಚಿ ಸಂಭ್ರಹಿಸಿದ್ದಾರೆ. ಟಿಕೆಟ್ ಕೈತಪ್ಪಿರುವ ಸಂಸದ ಅನಂತಕುಮಾರ ಹೆಗಡೆಯವರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸುವ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಾಗೇರಿ ವಿರೋಧಿ ಅಲೆ ಎದ್ದಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ 'ಹಿಂದೂ ವಿರೋಧಿ ಕಾಗೇರಿ' ಎಂದು ಬಿಂಬಿಸುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2013ರಲ್ಲಿ ಶಿರಸಿಯ ಕಸ್ತೂರ ಬಾ ನಗರದ 14ನೇ ವಾರ್ಡ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ವಿಶ್ವೇಶ್ವರ ಹೆಗಡೆ ಭಾಗಿಯಾಗಿದ್ದರು. ಅಂದು ಮುಸ್ಲಿಮರ ಟೋಪಿ ಧರಿಸಿ ಸಮುದಾಯದ ಜೊತೆಗೆ ಆಹಾರ ಸೇವಿಸಿದ್ದರು. ಹತ್ತು ವರ್ಷಗಳ ಹಿಂದೆ ತೆಗೆದ ಫೋಟೊಗಳು ಈಗ ವೈರಲ್ ಆಗುತ್ತಿವೆ. ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಮುಸ್ಲಿಂ ಟೋಪಿ ಧರಿಸಿರುವ ನಿಂತಿರುವ ಕಾಗೇರಿಯನ್ನು ಹಿಂದು ವಿರೋಧಿ ಎಂದು ಬಿಂಬಿಸಿ ಪೋಸ್ಟ್ ಮೇಲೆ ಪೋಸ್ಟ್ ಹಾಕುತ್ತಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ಕೇಳಿದ್ರೆ ನನಗೆ ವಿಷ ಕುಡಿಯಲು ಹಣವಿಲ್ಲ ಎಂದಿದ್ರು: ಲಕ್ಷ್ಮಣ್ ಸವದಿ ವಾಗ್ದಾಳಿ

ಅನಂತಕುಮಾರ ಹೆಗಡೆ ಬೆಂಬಲಿಗರಿಂದ ವೈರಲ್?

 ಉತ್ತರ ಕನ್ನಡದಲ್ಲಿ ಹಿಂದೂ ಫೈರ್ ಬ್ರಾಂಡ್ ಎನಿಸಿಕೊಂಡಿರುವ ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಈ ಬಾರಿಯೂ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುತ್ತದೆ ಎಂದು ಕಾರ್ಯಕರ್ತರು, ಬೆಂಬಲಿಗರು ನಂಬಿದ್ದರು. ಆದರೆ ಹಲವು ವಿವಾದಾತ್ಮಕ ಹೇಳಿಕೆಗಳಿಂದಲೋ ಏನೋ ಬಿಜೆಪಿ ಹೈಕಮಾಂಡ್ ಅನಂತಕುಮಾರ ಹೆಗ್ಡೆಯವರ ಹೆಸರು ಕೈಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡಿದೆ. ಇದು ಸಹಜವಾಗಿ ಅನಂತಕುಮಾರ ಹೆಗಡೆ ಬೆಂಬಲಿಗರನ್ನು ಕೆರಳಿಸಿದೆ. ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಸಿಕ್ಕ ಕಾರಣ ಹೆಗಡೆ ಬೆಂಬಲಿಗರಿಂದ ರಿವೆಂಜ್ ಆಗ್ತಿದೆಯಾ? ಹೆಗಡೆಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ವೈರಲ್ ಮಾಡ್ತಿದ್ದಾರಾ ಅನಂತ ಅಭಿಮಾನಿಗಳು ಎಂಬ ಅನುಮಾನ ಹುಟ್ಟಿಕೊಂಡಿದೆ.

ಅನಂತ ಕುಮಾರ ಹೆಗಡೆಗೆ ಟಿಕೆಟ್‌ ಕೈತಪ್ಪುತ್ತಲೇ ಭಟ್ಕಳ ಹಾಗೂ ಶಿರಸಿ ತಾಲೂಕಿನ ಅನಂತ ಕುಮಾರ್ ಬೆಂಬಲಿಗರು ಕಾಗೇರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದೇ ಅವಕಾಶ ಬಳಸಿಕೊಂಡು ಫೇಕ್ ಅಕೌಂಟ್‌ಗಳ ಮೂಲಕ ಅನಂತ ಕುಮಾರ ಹೆಗಡೆ ಬೆಂಬಲಿಗರ ಹೆಸರಲ್ಲಿ ಕಾಂಗ್ರೆಸ್ ಬೆಂಬಲಿಗರೇ ಫೊಟೊ ವೈರಲ್ ಮಾಡುತ್ತಿದ್ದಾರಾ? ಎಂಬ ಸಂದೇಹವೂ ಇದೆ.

'ನನಗೆ ಕ್ಷೇತ್ರ ಪರಿಚಯ ಇಲ್ಲದಿರಬಹುದು, ಆದರೆ ಜನ ಪರಿಚಯ ಇದ್ದಾರೆ': ಕಾಂಗ್ರೆಸ್ ಟೀಕೆಗೆ ಡಾ ಮಂಜುನಾಥ ತಿರುಗೇಟು

ಒಟ್ಟಿನಲ್ಲಿ ಹತ್ತು ವರ್ಷಗಳ ಹಿಂದಿನ ಫೋಟೊಗಳು ಈಗ ವೈರಲ್ ಆಗುತ್ತಿವೆ. ಒಂದು ಪಕ್ಷದೊಳಗಿನ ಕಾರ್ಯಕರ್ತರೇ ಹೀಗೆ ವೈರಲ್ ಮಾಡುತ್ತಿದ್ದರೆ ಪಕ್ಷಕ್ಕೇ ಹಿನ್ನೆಡೆಯಾಗಲಿದೆ. ಇಬ್ಬರ ನಡುವಿನ ಜಗಳ ಮೂರನೇವರಿಗೆ ಲಾಭ ಎಂಬಂತೆ ಅನಂತ-ಕಾಗೇರಿ ಬೆಂಬಲಿಗರ ನಡುವಿನ ಜಗಳ ಮುನಿಸು ಕಾಂಗ್ರೆಸ್ ನವರು ಲಾಭ ಮಾಡಿಕೊಳ್ಳುವುದಂತೂ ಗ್ಯಾರಂಟಿ.

click me!