ಫಕೀರ ದಿಂಗಾಲೇಶ್ವರ ಶ್ರೀ ಸೇರಿದಂತೆ ಕೆಲವು ಮಠಾಧೀಶರಿಗೆ ತಪ್ಪು ಗ್ರಹಿಕೆಯಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಮತಕ್ಷೇತ್ರದಿಂದ ಪ್ರಹ್ಲಾದ ಜೋಶಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಹುಬ್ಬಳ್ಳಿ (ಮಾ.28): ಫಕೀರ ದಿಂಗಾಲೇಶ್ವರ ಶ್ರೀ ಸೇರಿದಂತೆ ಕೆಲವು ಮಠಾಧೀಶರಿಗೆ ತಪ್ಪು ಗ್ರಹಿಕೆಯಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಮತಕ್ಷೇತ್ರದಿಂದ ಪ್ರಹ್ಲಾದ ಜೋಶಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು. ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಶಿ ಅವರು ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕರು.
ಅವರ ಕೆಲಸ ನೋಡಿಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವರನ್ನಾಗಿಸಿದ್ದರು. ಅವರ ನಾಯಕತ್ವವನ್ನು ದೇಶವೇ ನೋಡುತ್ತಿದೆ. ಇದೀಗ ಕೆಲವು ಮಠಾಧಿಪತಿಗಳಿಗೆ ಜೋಶಿ ಅವರ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ಈ ಕುರಿತು ನಾನು ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಎಲ್ಲ ಲಿಂಗಾಯತ ಮಠಾಧೀಶರೊಂದಿಗೆ ಮಾತನಾಡುತ್ತೇನೆ. ಸ್ವಾಮೀಜಿಗಳ ಮನವೋಲಿಸುವ ಕೆಲಸ ಮಾಡುತ್ತೇನೆ ಎಂದರು.
undefined
ದಾವಣಗೆರೆ ಬಂಡಾಯ ಬಗೆಹರಿಸಿದ ಬಿಎಸ್‌ವೈ: ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆಗೆ ಸರ್ವಸಮ್ಮತಿ
ಜೋಶಿ ಕೈವಾಡವಿಲ್ಲ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾತ್ರವಿದೆ ಎಂದು ದಿಂಗಾಲೇಶ್ವರ ಶ್ರೀಗಳು ಮಾಡಿದ ಆರೋಪಕ್ಕೆ ಉತ್ತರಿಸಿದ ಬಿಎಸ್‌ವೈ, ಇದರಲ್ಲಿ ಜೋಶಿ ಅವರ ಯಾವುದೇ ಪಾತ್ರವಿಲ್ಲ. ಅವರೊಬ್ಬ ಧೀಮಂತ ನಾಯಕ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಅಸಮಧಾನವಿಲ್ಲ: ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲವೂ ಸರಿ ಹೋಗಿದೆ. ದಾವಣಗೆರೆಯಲ್ಲಿ ಅಸಮಾಧಾನವಿತ್ತು, ಅಲ್ಲಿಗೆ ಹೋಗಿ ಸರಿಪಡಿಸಿದ್ದೇನೆ. ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧ ಅಸಮಾಧಾನವಿತ್ತು, ಅಲ್ಲೂ ಸರಿಪಡಿಸಿದ್ದೇನೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಪ್ಪು ಗ್ರಹಿಕೆಯಿಂದ ಮಾತನಾಡಿದ್ದಾರೆ. ಅವರ ಜತೆ ಚರ್ಚಿಸಲಾಗುತ್ತಿದೆ. ಎಲ್ಲವೂ ಸರಿ ಹೋಗುತ್ತದೆ ಎಂದರು.
ದೇವೇಗೌಡ ಪ್ರಚಾರಕ್ಕೆ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ನಮ್ಮೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬರುವುದಾಗಿ ತಿಳಿಸಿದ್ದಾರೆ. ಅವರ ಪ್ರಚಾರದಿಂದ ನಮಗೆ ಇನ್ನೂ ಹೆಚ್ಚಿನ ಶಕ್ತಿ ದೊರಕಲಿದೆ ಎಂದು ಯಡಿಯೂರಪ್ಪ ಹೇಳಿದರು.
ಲೋಕಸಭಾ ಟಿಕೆಟ್ ಭಿನ್ನಮತ ಶಮನಕ್ಕೆ ಬಿಎಸ್‌ವೈ ಸಾರಥ್ಯ: ಕೊಪ್ಪಳ, ಬಳ್ಳಾರಿ, ದಾವಣಗೆರೆಯಲ್ಲಿ ಯಶಸ್ವಿ?
ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರುವವರ ದೊಡ್ಡ ಪಟ್ಟಿ ಇದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ಅಂತಹ ಹಡಗಿಗೆ ಹೋಗಿ ಯಾರು ಮುಳುಗುತ್ತಾರೆ? ಡಿಕೆಶಿ ಸುಮ್ಮನೆ ಹಸಿಸುಳ್ಳು ಹೇಳುತ್ತಾರೆ ಎಂದ ಅವರು, ರಾಜ್ಯದ 27 ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ವಾತಾವರಣ ಇದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ 28ಕ್ಕೆ 28 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.