ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸದೇ 90 ವರ್ಷದ ಹಿರಿಯ ಜೀವಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಸೋಲಿಸಲು ಪರೋಕ್ಷವಾಗಿ ಬೆಂಬಲ ನೀಡಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು (ಏ.03): ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸದೇ 90 ವರ್ಷದ ಹಿರಿಯ ಜೀವಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಸೋಲಿಸಲು ಪರೋಕ್ಷವಾಗಿ ಬೆಂಬಲ ನೀಡಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಹೊರವಲಯದ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಖಂಡರು ಮತ್ತು ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 2019ರ ಚುನಾವಣೆಯ ಕಹಿ ಘಟನೆ ಮತ್ತೆ ಮರುಕಳಿಸಬಾರದು. ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಮೈತ್ರಿ ಧರ್ಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ದೇಶದ ಅಭಿವೃದ್ಧಿಗೆ ಮುನ್ನಡಿ ಬರೆದಿರುವ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿದ್ದೇವೆ. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಗೆಲುವಿಗೆ ತಳಮಟ್ಟದಿಂದ ಕೆಲಸ ಮಾಡಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮ ಪಡಬೇಕಿದೆ ಎಂದು ಕರೆ ನೀಡಿದರು. ಬಿಜೆಪಿ- ಜೆಡಿಎಸ್ ಮೈತ್ರಿಯೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ 20 ತಿಂಗಳ ತಮ್ಮ ಆಡಳಿತದಲ್ಲಿ ಜನತಾ ದರ್ಶನ ಕಾರ್ಯಕ್ರಮ ಜನಮಾನಸದಲ್ಲಿ ಉಳಿದಿದೆ. ಗ್ರಾಮ ವಾಸ್ತವ್ಯ ಜನಪರವಾಗಿದೆ. ಎಚ್ಐವಿ ರೋಗಿ ಮನೆಯಲ್ಲಿ ವಾಸ್ತವ್ಯ ಮಾಡಿ, ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಎಚ್ಡಿಕೆಗೆ ಸಲ್ಲುತ್ತದೆ ಎಂದರು.
‘ಜೆಡಿಎಸ್’ನವರನ್ನು ಕೆರಳಿಸಬೇಡಿ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 38 ಸ್ಥಾನಗಳನ್ನು ಗೆದ್ದರೂ 6 ಕೋಟಿ ಕನ್ನಡಿಗರ ಆಶೀರ್ವಾದದಿಂದ ರಾಜ್ಯದ ರೈತರ ಎಲ್ಲಾ ಸಾಲಮನ್ನಾ ಮಾಡಿದರು. ಆದರೆ, ಕಾಂಗ್ರೆಸ್ ನವರು ನೆಮ್ಮದಿಯಾಗಿ ಅಧಿಕಾರ ನಡೆಸಲು ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಲಿಲ್ಲ ಎಂದು ದೂರಿದರು. ಅಧಿಕಾರದ ಮದ ಕಾಂಗ್ರೆಸ್ ನಾಯಕರಲ್ಲಿ ತುಂಬಿ ಹೋಗಿದೆ. ಸೋನಿಯಾಗಾಂಧಿ ಬಳ್ಳಾರಿ, ರಾಹುಲ್ ಗಾಂಧಿ ಕೇರಳದಲ್ಲಿ, ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡಬಹುದು. ಆದರೆ, ಕುಮಾರಸ್ವಾಮಿ ಮಾತ್ರ ಮಂಡ್ಯಕ್ಕೆ ಬಂದರೆ ಜಿಲ್ಲೆಯ ಕಾಂಗ್ರೆಸ್‌ನ ಸಚಿವ, ಶಾಸಕರಿಗೆ ಏನಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಈ ಚುನಾವಣೆ ಹೃದಯವಂತರು ಮತ್ತು ಹಣವಂತರ ನಡುವಿನ ಚುನಾವಣೆಯಾಗಿದೆ. ಕ್ಷೇತ್ರದ ಜನರು ಹಣಕ್ಕೆ ಬೆಲೆ ನೀಡದೆ ಹೃದಯವಂತನಿಗೆ ಗೌರವ ನೀಡಬೇಕು ಮನವಿ ಮಾಡಿದರು. ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ನೀಡುತ್ತಾರೆ ಹೊರತು ಹಣಕಲ್ಲ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದೆ. ಕುಮಾರಸ್ವಾಮಿ ಅವರು ಗೆದ್ದು ಕೃಷಿ ಸಚಿವರಾಗುವ ಸೂಚನೆಗಳಿವೆ. ಇದರಿಂದ ಕಾವೇರಿ ಸಮಸ್ಯೆ ಸೇರಿದಂತೆ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೃಷಿಕರ ಪರ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರು ಗೆಲುವು ಸಾಧಿಸುವುದರಿಂದ ರೈತರಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಾರೆ ಎಂದರು.
ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ: ನಿಖಿಲ್ ಕುಮಾರಸ್ವಾಮಿ
ಸಭೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯ ರಾಮಚಂದ್ರ ಶೆಟ್ಟಿ, ಅಂಬುಜಮ್ಮ, ವೀಕ್ಷಕ ಸುನೀಲ್, ಡಾ. ಜೈರಾಮು, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಕೆ.ಸತೀಶ್, ಹಾಲು ಪ್ರಕೋಷ್ಠದ ಸಂಚಾಲಕಿ ರೂಪ, ಬಿಜೆಪಿ - ಜೆಡಿಎಸ್ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.