ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ನಡೆಯುತ್ತಿಲ್ಲ: ಡಾ.ಕೆ.ಸುಧಾಕರ್‌

By Kannadaprabha News  |  First Published Mar 29, 2024, 12:58 PM IST

ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಬೆಂಗಳೂರಿಗೆ ಉಪನಗರಗಳಾಗಿ ಬೆಳೆಸುವ ಗುರಿ ನನ್ನದು. ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.


ದೇವನಹಳ್ಳಿ (ಮಾ.29): ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಬೆಂಗಳೂರಿಗೆ ಉಪನಗರಗಳಾಗಿ ಬೆಳೆಸುವ ಗುರಿ ನನ್ನದು. ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಈ ಬಾರಿಯೂ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು. ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿ, ದೆಹಲಿಗೆ ಪರ್ಯಾಯವಾಗಿ ನೋಯ್ಡಾ ಇರುವಂತೆ ಬೆಂಗಳೂರಿಗೆ ಪರ್ಯಾಯವಾಗಿ ದೇವನಹಳ್ಳಿಯನ್ನು ಬೆಳೆಸುವ ಗುರಿ ನನ್ನದು. ಹಾಗೆಯೇ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲವನ್ನು ಉಪನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಾಂಗ್ರೆಸ್‌ನಿಂದ ಅಭಿವೃದ್ಧಿ ಅಸಾಧ್ಯ: ನನ್ನನ್ನು ಆಯ್ಕೆ ಮಾಡಿದರೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ನೆರವಾಗಲಿದೆ. ಕಾಂಗ್ರೆಸ್‌ಗೆ ಮತ ಹಾಕಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದೇ ರಸ್ತೆ, ಸೇತುವೆ ನಿರ್ಮಿಸಿಲ್ಲ. ಎಲ್ಲಿಯೂ ಅಭಿವೃದ್ಧಿ ನಡೆಯುತ್ತಿಲ್ಲ. ಇದನ್ನು ಜನರಿಗೆ ತಿಳಿಸಬೇಕಿದೆ. ಜೆಡಿಎಸ್‌ ಜೊತೆ ಸಮನ್ವಯ ತಂಡಗಳನ್ನು ರಚಿಸಿ, ಪ್ರತಿ ಹಂತದಲ್ಲೂ ತಂಡಗಳನ್ನು ರಚಿಸಿ ನಾವು ಕೆಲಸ ಮಾಡಬೇಕು. ಬಿಜೆಪಿ-ಜೆಡಿಎಸ್‌ ಒಳಗೊಂಡ ಬೃಹತ್‌ ಪ್ರಚಾರ ಸಭೆಯನ್ನೂ ನಡೆಸಬೇಕಿದೆ ಎಂದರು.

Tap to resize

Latest Videos

undefined

ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ: ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಜನ ಉತ್ಸುಕರಾಗಿದ್ದಾರೆ. ಐನೂರು ವರ್ಷಗಳಿಂದ ರಾಮ ಮಂದಿರ ಕೇವಲ ಕನಸಾಗಿತ್ತು. ಆದರೆ ಇದು ಬಿಜೆಪಿಗೆ ಕೇವಲ ರಾಜಕೀಯ ಲಾಭನಷ್ಟದ ವಿಚಾರವಲ್ಲ ಎನ್ನುವುದು ಮಂದಿರ ಲೋಕಾರ್ಪಣೆ ಮಾಡಿದ ಬಳಿಕ ಸಾಬೀತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜೀವಂತವಿದ್ದಾಗ ಅವರನ್ನು ಲೋಕಸಭೆಗೆ ಪ್ರವೇಶಿಸಲು ಕಾಂಗ್ರೆಸ್‌ ಬಿಡಲಿಲ್ಲ. ಅವರ ಹೆಸರು ಹೇಳಲು ಕೂಡ ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲ ಎಂದರು. ಬಾಬಾ ಸಾಹೇಬರ ಅಂತ್ಯಸಂಸ್ಕಾರ ಮಾಡಲು ಕೂಡ ಕಾಂಗ್ರೆಸ್‌ ಜಾಗ ಕೂಡ ನೀಡಲಿಲ್ಲ. 

ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ: ಎಚ್ಡಿಕೆ ವ್ಯಂಗ್ಯ

ದಲಿತರನ್ನು ಉದ್ಧಾರ ಮಾಡುವ ಹಾಗಿದ್ದರೆ ಅವರಿಗೆ ಮೀಸಲಾದ ಹಣದಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಿದ್ದು ಯಾಕೆ ಎಂದು ಪ್ರಶ್ನಸಿದ ಸುಧಾಕರ್‌. ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿತ್ತು ಎಂದರು. ಒಂದಾಗಿ ಕೆಲಸ ಮಾಡುತ್ತೇವೆ: ಬಿಜೆಪಿಯಲ್ಲಿ ಅಭ್ಯರ್ಥಿ ಆರಿಸುವಾಗ ಒಂದೇ ಬಾರಿಗೆ ತೀರ್ಮಾನಿಸಲಾಗುತ್ತದೆ. ಹಿರಿಯ ನಾಯಕರಾದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಸ್ವಾಭಾವಿಕವಾಗಿಯೇ ಟಿಕೆಟ್‌ ವಿಚಾರದಲ್ಲಿ ಬೇಸರವಾಗಿದೆ. ಆದರೂ ಅದನ್ನು ಮೀರಿ ಅವರು ಪಕ್ಷದ ಕಟ್ಟಾಳಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಅವರನ್ನು ಕೂಡ ಭೇಟಿಯಾಗಿ ಚರ್ಚಿಸುತ್ತೇನೆ. ಎಲ್ಲರೂ ಒಂದಾಗಿ ಕೆಲಸ ಮಾಡಲಿದ್ದೇವೆ ಎಂದು ಡಾ.ಕೆ.ಸುಧಾಕರ್‌ ಹೇಳಿದರು.

click me!