
ಬೆಂಗಳೂರು(ಸೆ.20): ‘ಕಾಂಗ್ರೆಸ್ ಸರ್ಕಾರ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸರ್ಕಾರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ ಕೋಮುಗಲಭೆ ವಿಚಾರದಲ್ಲಿ ಸರಿಯಾಗಿ ತನಿಖೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೆ. ಜನರು ಹೇಳಿದ್ದನ್ನು ಕೇಳಿಯೇ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದನ್ನು ಸುಳ್ಳು ಎಂದು ಸಚಿವರೇ ಹೇಳಿದ್ದರು. ಬಳಿಕ ಅದು ನಿಜ ಎಂದು ಸಾಬೀತಾಯಿತು. ಹಾಗಾದರೆ ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಬೇಡವೇ ಎಂದು ಪ್ರಶ್ನಿಸಿದರು.
ದೇವೇಗೌಡರ ಮಾನ ತೆಗೆವಾಗ ಕಾಂಗ್ರೆಸ್ ಒಕ್ಕಲಿಗರು ಎಲ್ಲಿದ್ದರು: ಆರ್. ಅಶೋಕ್
ವಿರೋಧ ಪಕ್ಷದ ನಾಯಕನಾಗಿ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸರ್ಕಾರದಿಂದ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ವಿರೋಧ ಪಕ್ಷವನ್ನು ಬಗ್ಗುಬಡಿಯಬೇಕೆಂದು ಸರ್ಕಾರ ನಿರ್ಧಾರ ಮಾಡಿದೆ. ಪಾಕ್ ಜಿಂದಾಬಾದ್ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಸಚಿವರು ರಾಜೀನಾಮೆ ನೀಡಬೇಕಿತ್ತು. ಹಾಗಾದರೆ ವಿರೋಧ ಪಕ್ಷವಾಗಿ ನಾವು ಏನು ಮಾಡಬೇಕು ಎಂದು ಹರಿಹಾಯ್ದರು.
ರಾಜ್ಯದಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಜಾರಿ ಮಾಡಲು ಮುಂದಾಗಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಪೊಲೀಸರನ್ನು ಬೊಂಬೆಯಂತೆ ಆಡಿಸುತ್ತಿದ್ದಾರೆ. ಈ ಸರ್ಕಾರ ರಾಜ್ಯಪಾಲರನ್ನೂ ಬಿಟ್ಟಿಲ್ಲ. ಅವರ ಮೇಲೂ ಗದಾ ಪ್ರಹಾರ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರ ಅಧಿಕಾರ ಕಸಿಯಲು ಸರ್ಕಾರ ಮುಂದಾಗಿದೆ. ನಾವು ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದೆವು. ಹೀಗಾಗಿ ಈ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.