ಲಕ್ಷ್ಮಿ ಫೋಟೋ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Oct 9, 2023, 6:03 AM IST
Highlights

ಲಕ್ಷ್ಮಿ ಫೋಟೋ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ. ಸರಸ್ವತಿ ಫೋಟೋ ಪೂಜಿಸಿದರೆ ವಿದ್ಯೆ ಸಿಗುವುದಿಲ್ಲ. ಶ್ರಮಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟರು. 

ಬೆಂಗಳೂರು (ಅ.09): ಲಕ್ಷ್ಮಿ ಫೋಟೋ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ. ಸರಸ್ವತಿ ಫೋಟೋ ಪೂಜಿಸಿದರೆ ವಿದ್ಯೆ ಸಿಗುವುದಿಲ್ಲ. ಶ್ರಮಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟರು. ಆರ್‌.ಎಂ.ಆರ್‌.ಹಳ್ಳಿಕಾರ ಫೌಂಡೇಷನ್‌ ಟ್ರಸ್ಟ್‌ನಿಂದ ಜಯನಗರದ ಪೂರ್ಣಿಮಾ ಕನ್ವೆನ್‌ಷನ್‌ ಸೆಂಟರ್‌ನಲ್ಲಿ ಆಯೋಜಿಸಿದ್ದ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಕ್ಷ್ಮಿ ಫೋಟೋ ಪೂಜಿಸಿದಾಕ್ಷಣ ಹಣ ಸಿಗುವುದಿಲ್ಲ. ಗಣಪತಿ ಫೋಟೋಗೆ ಪೂಜೆ ಮಾಡಿದರೆ ವಿಘ್ನ ನಿವಾರಣೆ ಆಗುವುದಿಲ್ಲ, ಸರಸ್ವತಿ ಫೋಟೋ ಪೂಜಿಸಿದ ತಕ್ಷಣ ವಿದ್ಯೆ ಸಿಗುವುದಿಲ್ಲ. ನಾವು ಶ್ರಮ ಪಟ್ಟಾಗ ಮಾತ್ರ ಪ್ರತಿಫಲ ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸ ಸಮಯದಲ್ಲಿ ಅಭ್ಯಾಸಕ್ಕೆ ಹೆಚ್ಚು ಸಮಯ ನೀಡಿದಾಗ ಯಶಸ್ಸು ಸಾಧಿಸಲು ಸಾಧ್ಯ. ಮಕ್ಕಳು ಚೆನ್ನಾಗಿ ಬದುಕಿದರೆ ಪೋಷಕರೂ ಸಂತೋಷಪಡುತ್ತಾರೆ ಎಂದು ತಿಳಿಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಎಂ.ಕೃಷ್ಣಪ್ಪ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಟ್ರಸ್ಟ್‌ ಅಧ್ಯಕ್ಷ ಕೆ.ಎಂ.ನಾಗರಾಜ್ ಹಾಜರಿದ್ದರು.

ಬಿಜೆಪಿಗೆ ಕಾಂಗ್ರೆಸ್‌ ಬಗ್ಗೆ ಭಯ ಹುಟ್ಟಿರುವುದು ಪೋಸ್ಟರ್‌ನಿಂದ ಸ್ಪಷ್ಟ: ಡಿಕೆಶಿ

ಟ್ರಾಫಿಕ್‌ ತಡೆಗೆ ಸಾರಿಗೆ ಸಂಪರ್ಕ ಅಗತ್ಯ: ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಇದನ್ನು ಸುಧಾರಿಸಲು ಮೆಟ್ರೋ ಸೇರಿದಂತೆ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆಯ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್ ಸಿಎ) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ಬಿಡುವುದಿಲ್ಲ. 

ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನೌಕರರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸಲು ಆದ್ಯತೆ ನೀಡುತ್ತೇವೆ ಎಂದರು. ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. 

ಬಾರ್‌ಗೆ ಹೊಸ ಲೈಸೆನ್ಸ್‌ ಕೊಡ್ತೇವಂತ ಡಿಸಿಎಂ ಹೇಳಿಲ್ಲ: ಸಿದ್ದರಾಮಯ್ಯ

ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಪೊಲೀಸ್, ಬಿಬಿಎಂಪಿ, ಬಿಡಿಎ, ಮೆಟ್ರೋ ಕಮಿಷನರ್‌ಗಳಿಗೆ ಸಂಚಾರ ದಟ್ಟಣೆ ಬಗ್ಗೆ ಅರಿವಿದೆ, ಅವರೂ ಸಹ ಸರ್ಕಾರದ ಒತ್ತಾಸೆಯಂತೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

click me!