* ಅನಗತ್ಯವಾಗಿ ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದ ಬಿಜೆಪಿ
* ಮತದಾರರು ಕಿವಿಗೊಡದೆ ಮತ ಚಲಾಯಿಸುವ ಮೂಲಕ ಪ್ರಕಾಶ ಹುಕ್ಕೇರಿಯವರನ್ನು ಗೆಲ್ಲಿಸಿದ್ದಾರೆ
* ಮತದಾರರಿಗೆ ಪಕ್ಷದ ಪರವಾಗಿ ಕೃತಜ್ಞತೆ
ಬೆಳಗಾವಿ(ಜೂ.16): ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಆಯ್ಕೆಗೆ ಸಂತಸ ವ್ಯಕ್ತಪಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದವರಿಗೆ ಶಿಕ್ಷಕ ಮತದಾರರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬಿಜೆಪಿಯವರು ಅನಗತ್ಯವಾಗಿ ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದರು. ಪ್ರಕಾಶ ಹುಕ್ಕೇರಿ ಮುದಿ ಎತ್ತು, ಅವರು ಎಸ್‌ಎಸ್‌ಎಲ್‌ಸಿ ಪಾಸಾಗಲಿಲ್ಲ, ಹಣ ಹಂಚಿದ್ದಾರೆ ಎಂದೆಲ್ಲ ಹೇಳುವ ಮೂಲಕ ಶಿಕ್ಷಕರ ದಾರಿ ತಪ್ಪಿಸುವ ಯತ್ನ ಮಾಡಿದ್ದರು. ಆದರೆ ಇದಕ್ಕೆಲ್ಲ ಮತದಾರರು ಕಿವಿಗೊಡದೆ ಮತ ಚಲಾಯಿಸುವ ಮೂಲಕ ಪ್ರಕಾಶ ಹುಕ್ಕೇರಿಯವರನ್ನು ಗೆಲ್ಲಿಸಿದ್ದಾರೆ ಎಂದಿದ್ದಾರೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಭರ್ಜರಿ ಗೆಲುವು: ಅಧಿಕೃತ ಘೋಷಣೆಯೊಂದೇ ಬಾಕಿ
ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಒಟ್ಟಾಗಿ ನಿಂತು ಕೆಲಸ ಮಾಡಿದ್ದು, ಪ್ರಕಾಶ ಹುಕ್ಕೇರಿಯವರ ಹಿಂದಿನ ಸಾಧನೆ ಹಾಗೂ ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಜನಪರ ಕೆಲಸಗಳಿಗೆ ಸಂದ ಜಯ ಇದಾಗಿದೆ. ಮತದಾರರಿಗೆ ಪಕ್ಷದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.