'ಇನ್ನೂ ಬದುಕಿದ್ದೇನೆಂದು ತೋರಿಸಲು ಕುಮಾರಸ್ವಾಮಿ ವಿಡಿಯೋ ರಿಲೀಸ್ ಮಾಡಿದ್ದಾರೆ'

By Suvarna News  |  First Published Jan 10, 2020, 5:15 PM IST

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೊಸ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದು ಇದೀಗ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ.


ಶಿವಮೊಗ್ಗ (ಜ. 10): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿಕೆ ಮಾಡಿರುವ ವಿಡಿಯೋ ಬಿಡುಗಡೆಗೆ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 

ಈ ಬಗ್ಗೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಈಶ್ವರಪ್ಪ, ಅಧಿಕಾರ ಕಳೆದುಕೊಂಡಿರುವ ಎಚ್​.ಡಿ. ಕುಮಾರಸ್ವಾಮಿ ತಾನಿನ್ನೂ ಬದುಕಿದ್ದೇನೆ ಎಂದು ಜಗತ್ತಿಗೆ ತೋರಿಸಿಕೊಳ್ಳಲು ಈ ವಿಡಿಯೋ ರಿಲೀಸ್ ಮಾಡಿದ್ದಾರೆ ಎಂದು ಕಿಚಾಯಿಸಿದರು.

Tap to resize

Latest Videos

ಕುಮಾರಸ್ವಾಮಿ ಸ್ಫೋಟಕ ವಿಡಿಯೋ ರಿಲೀಸ್: ಒಂದಲ್ಲ ಎರಡಲ್ಲ 35

ಕುಮಾರಸ್ವಾಮಿ ಇನ್ನು ಎಂದೂ ಸಿಎಂ ಆಗುವುದಿಲ್ಲ. ಎಷ್ಟೇ ವಿಡಿಯೋ ಮಾಡಿದರೂ 10 ಜನ್ಮ ಕಳೆದು ಬಂದ್ರು  ಸಿಎಂ ಆಗಲ್ಲ ಎಂದು ಲೇವಡಿ ಮಾಡಿದರು. 

ರಾಜ್ಯ ಸರ್ಕಾರದ ವಿರುದ್ಧ ಎಷ್ಟೇ ಆರೋಪ ಮಾಡಿದರೂ ನಾವು ಒಪ್ಪುವುದಿಲ್ಲ. ಗಲಭೆಯಲ್ಲಿ ವ್ಯವಸ್ಥಿತ ಸಂಚು ನಡೆದಿರುವ ಬಗ್ಗೆ ನ್ಯಾಯಾಂಗ ತನಿಖೆ ನಡೆದ ನಂತರ ಸತ್ಯವೇನೆಂಬುದು ತಿಳಿಯಲಿದೆ. ಆಗ, ಗಲಭೆಯಲ್ಲಿ ಇನ್ನು ಯಾರೆಲ್ಲ ಇದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಗೂಂಡಾಗಳು ಮಂಗಳೂರಿನಲ್ಲಿ ಸಂಚು ನಡೆಸಿ ಗಲಭೆ ನಡೆಸಿದರು ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬಂದಿದ್ದನ್ನು ಕುಮಾರಸ್ವಾಮಿ ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಜನ ಈ ಘಟನೆ ನೋಡಿದ್ದಾರೆ ಎಂದು ಹೇಳಿದರು.

ನೀವು ಎಷ್ಟೇ ಆರೋಪ ಮಾಡಿದರೂ ಆವುಗಳನ್ನು ನಾವು ಒಪ್ಪಲ್ಲ.  ಗಲಭೆಯಲ್ಲಿ ವ್ಯವಸ್ಥಿತ ಸಂಚು ನಡೆದಿರುವ ಬಗ್ಗೆ ನ್ಯಾಯಾಂಗ ತನಿಖೆಯಲ್ಲಿ ತಿಳಿಯಲಿದೆ. ಆ ನಂತರ ಗಲಭೆಯಲ್ಲಿ ಇನ್ನು ಯಾರು ಯಾರು ಇದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಒಂದಲ್ಲ ಎರಡಲ್ಲ ಬರೋಬ್ಬರಿ 35 ವಿಡಿಯೋಗಳನ್ನು ರಿಲೀಸ್‌ ಮಾಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. 

ಕುಮಾರಸ್ವಾಮಿ ಹೇಳಿದ್ದೇನು..?
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ವಿಡಿಯೋ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಮಂಗಳೂರು ಗಲಭೆ ಕುರಿತು ಸರ್ಕಾರ ಬಿಡುಗಡೆ ಮಾಡಿದ್ದ ವಿಡಿಯೋ ಎಷ್ಟು ನಿಜ ಎಂಬುದು ಬಹಿರಂಗವಾಗಬೇಕು. ಪೊಲೀಸರ ದೌರ್ಜನ್ಯ ಮುಚ್ಚಿಕೊಳ್ಳಲು ಸರ್ಕಾರ ಅವರ ಪರ ವಹಿಸಿದೆ. ಗೋಲಿಬಾರ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಹರ್ಷ ನಡೆ ಅನುಮಾನಾಸ್ಪದವಾಗಿದೆ. ಹಿಂಸಾಚಾರಕ್ಕೆ ಪೊಲೀಸರೇ ಪ್ರಚೋದನೆ ನೀಡಿದ್ದಾರೆ. ಮಂಗಳೂರು ಪೊಲೀಸ್​ ಆಯುಕ್ತ ಹರ್ಷ ಅವರನ್ಅನ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಘಟನೆ ಹಿನ್ನೆಲೆ
ಡಿಸೆಂಬರ್ 19ರಂದು ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆದಿತ್ತು. ಅದರಲ್ಲೂ ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾತ್ಮಕಕ್ಕೆ ತಿರುಗಿತ್ತು. ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದರು. ಈ ಹಿನ್ನೆಲೆಯಲ್ಲಿ ಜಲೀಲ್ ಕುದ್ರೋಳಿ(49) ಮತ್ತು ನೌಶೀನ್ (23) ಮೃತಪಟ್ಟಿದ್ದರು.

click me!