
ಬೆಂಗಳೂರು (ಸೆ.30): ರಾಜ್ಯ ಸರ್ಕಾರಿ ಯೋಜನೆಗಳಿಗೆ ನಡೆಯುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ, ಪರಿಹಾರ ನೀಡಿಕೆಯಲ್ಲಿ ಅನ್ಯಾಯ, ಅವ್ಯವಹಾರ ತಡೆಯಲು ರಾಜ್ಯದಲ್ಲಿ ಆನ್‌ಲೈನ್ ಆಧಾರಿತ ಏಕೀಕೃತ ಭೂಸ್ವಾಧೀನ ವ್ಯವಸ್ಥೆ-ದತ್ತಾಂಶ ಮಾದರಿ ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳಿಂದ ನಡೆಯುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸಲು ಮತ್ತು ಪ್ರಸ್ತುತ ಕೈಗೊಳ್ಳುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ಹಿಂದಿನ ಭೂಸ್ವಾಧೀನ ಪ್ರಕರಣಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಏಕೀಕೃತ ಡಿಜಿಟಲ್ ವೇದಿಕೆ ಇದಾಗಿದೆ. ಇದು ಎಲ್ಲ ಭೂಸ್ವಾಧೀನ ಪ್ರಕ್ರಿಯೆಗಳು, ಅದರ ಸ್ಥಿತಿಗಳ ಕುರಿತು ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ಕೈಗೊಳ್ಳುವ ಸಂಸ್ಥೆಗಳಿಗೆ ಕ್ರೋಢೀಕೃತ ಡ್ಯಾಶ್‌ಬೋರ್ಡ್‌ನ ಮೂಲಕ ತಲುಪಿಸಲು ಅನುವಾಗಲಿದೆ ಎಂದು ತಿಳಿಸಿದರು.
ಈ ತಂತ್ರಾಂಶ ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಇ-ಸ್ವತ್ತು ತಂತ್ರಾಂಶಗಳು, ಯುಎಲ್‌ಇಎಂಎಸ್ ಇ-ಖಾತಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಸೇರಿ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳೊಂದಿಗೆ ಜೋಡಣೆಯಾಗಿರುವ ಏಕೀಕೃತ ವ್ಯವಸ್ಥೆಯಾಗಿದೆ. ದೇಶದಲ್ಲೇ ಮೊದಲು ಇಂತಹದ್ದೊಂದು ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಸದ್ಯ ಈ ತಂತ್ರಾಂಶಕ್ಕೆ ಈಗ ಚಾಲನೆ ನೀಡಲಾಗಿದ್ದು, ಮುಂದಿನ 15 ದಿನ ಇದರ ಬಳಕೆ ಸಂಬಂಧ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗೆ ಕಾರ್ಯಾಗಾರ ನಡೆಯಲಿದೆ. ಅಷ್ಟರೊಳಗೆ ಯಾವುದಾದರೂ ಸಮಸ್ಯೆಗಳು ಕಂಡು ಬಂದರೆ, ಸಲಹೆಗಳು ಬಂದರೆ ಅವುಗಳನ್ನು ಪರಿಶೀಲಿಸಿ ಇನ್ನಷ್ಟು ಸುಧಾರಣೆಗೆ ತರಲಾಗುವುದು. ನಂತರ ಅಧಿಕೃತವಾಗಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು.
ಅಧಿಕಾರಿಗಳೇ ಶಾಮೀಲು: ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದುರುಪಯೋಗ ಹೆಚ್ಚಾಗಿ ಹಗರಣಗಳಿಗೆ ದಾರಿಯಾಗುತ್ತಿತ್ತು. ಭೂಸ್ವಾಧೀನ ಅಧಿಸೂಚನೆಯನ್ನೇ ಮರೆಮಾಚಿ ಅಂಥ ಕಡೆ ಕಡಿಮೆ ಹಣಕ್ಕೆ ಭೂಮಿ ಖರೀದಿ ಮಾಡುವುದು, ರಾತ್ರೋರಾತ್ರಿ ಭೂ ಪರಿವರ್ತನೆ ಮಾಡುವುದು, ನಂತರ ಭೂಸ್ವಾಧೀನದಿಂದ ಹೆಚ್ಚು ಪರಿಹಾರ ಪಡೆಯುಂಥ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನೇ ತಡ ಮಾಡಿ ಅಧಿಸೂಚನೆ ಆದ ಜಮೀನಿನಲ್ಲಿ ಇದ್ದಕ್ಕಿದ್ದಂತೆ ತಾತ್ಕಾಲಿಕ ಕಟ್ಟಡ ನಿರ್ಮಾನ ಮಾಡಿ ಅದಕ್ಕೂ ಪರಿಹಾರ ಪಡೆಯುವುದು.
ನೋಟಿಫಿಕೇಷನ್ ಆದಾಗ ಇದ್ದ ಖಾಲಿ ಜಮೀನಲ್ಲಿ ಮಹಜರು ವೇಳೆ ಮರಗಳನ್ನು ಬೇರೆಡೆಯಿಂದ ತಂದು ನೆಟ್ಟು ಕೋಟಿಗಟ್ಟಲೆ ಪರಿಹಾರ ಪಡೆದಿದ್ದಾರೆ. ಈ ಮರಗಳನ್ನು ನೆಡಲು ಆಂಧ್ರದ ಜಾಲವೊಂದು ಕೆಲಸ ಮಾಡುತ್ತದೆ. ಒಂದೇ ಜಮೀನಿಗೆ ಎರಡು ಬಾರಿ ಪರಿಹಾರ ನೀಡಿರುವುದು... ಇಂತಹ ಪ್ರಕರಣಗಳ ಅಧಿಕೃತ ಮಾಹಿತಿಗಳು ನಮ್ಮಲ್ಲಿವೆ. ಇದರಲ್ಲಿ ನಮ್ಮ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಆದರೆ, ಎಲ್ಲಾ ಅಧಿಕಾರಿಗಳು ಹೀಗೆ ಇದ್ದಾರೆ ಅಂತ ಅಲ್ಲ. ಇದನ್ನ ತಪ್ಪಿಸೋಕೆ ನಾವು ಡಿಜಿಟಲ್ ವೇದಿಕೆ ತಂದಿದ್ದೇವೆ ಎಂದರು.
ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಒಂದು ಪತ್ರ ಬರೆದಿದ್ದಾರೆ. ಭೂ ಸ್ವಾಧೀನ ಮತ್ತು ಪರಿಹಾರ ವಿಚಾರದಲ್ಲಿ ಕಷ್ಟ, ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸಲು ಕೋರಿದ್ದಾರೆ. ಇದರಿಂದ ನಮಗೂ ಮುಜುಗರ ಆಗುತ್ತಿದೆ. ಈಗಲೇ ಇದನ್ನು ಸರಿಪಡಿಸದಿದ್ದರೆ ರಾಜ್ಯದ ದೊಡ್ಡ ದೊಡ್ಡ ಯೋಜನೆಗಳಿಗೆ ಸಮಸ್ಯೆಯಾಗಲಿದೆ. ಒಂದೊಂದು ಯೋಜನೆಗೂ ಸರ್ಕಾರಕ್ಕೆ ಸಾವಿರಾರು ಕೋಟಿ ರು. ಹೆಚ್ಚುವರಿ ಹೊರೆ ಆಗಲಿದೆ. ಹಾಗಾಗಿ ಸುಧಾರಣೆ ತರಲು ಮುಂದಾಗಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.