
ಹೊಸಕೋಟೆ (ಮಾ.05): ಕಂದಾಯ ಇಲಾಖೆಯಲ್ಲಿ 1219 ಲೈಸೆನ್ಸ್ ಸರ್ವೇಯರ್ ಇದ್ದಾರೆ. ಈಗಾಗಲೇ 1000 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 750 ಸರ್ವೇಯರ್ ನೇಮಕಾತಿ ಶೀಘ್ರವಾಗಿ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಂದಾಯ ಕೆಲಸಗಳು ಕ್ಷಿಪ್ರವಾಗಿ ನಡೆಯಲು 1219 ಲೈಸೆನ್ಸ್ ಸರ್ವೇಯರ್‌ಗಳಿಗೆ ರೋಬೋ ಮಿಷನರಿ ಕೊಟ್ಟು ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶವಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದ್ದು, ರೈತರ ಮನೆಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯಾದ್ಯಂತ 7850 ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. ಇವೆಲ್ಲವೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸಗಳಾಗಿವೆ. ನಮ್ಮ ಸರ್ಕಾರ ಬಂದಾಗ ಆರಂಭದಲ್ಲಿ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್‌ಗಳಲ್ಲಿ ಸುಮಾರು 10,774 ಕೋರ್ಟ್ ಕೇಸ್‌ಗಳು ಬಾಕಿ ಉಳಿದಿದ್ದವು. ಈಗ ಕೇವಲ 488 ಬಾಕಿ ಇವೆ. ಶೇ.99 ಕೇಸ್ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ ರಚನೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿವುದರ ಜೊತೆಗೆ 25 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.
ಪ್ರಸ್ತುತದ ಸರ್ಕಾರ ಅಧಿಕಾರಕ್ಕೆ ಬಂದ 1,000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು, ಅದರ ಪ್ರತಿಫಲವೇ ಇಂದು ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.