ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ, ಸಂಸ್ಥೆ ಮುಚ್ಚಿ: ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

Published : Mar 13, 2026, 10:32 PM IST
Priyank kharge

ಸಾರಾಂಶ

ಎಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದರೂ ಕೆಪಿಎಸ್‌ಸಿಯವರಿಗೆ ಭಯ ಇಲ್ಲದಂತಾಗಿದೆ. ಖಾಲಿ ಪತ್ರಿಕೆ ನೀಡಿದವರೂ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಪಿಎಸ್‌ಸಿ ಸಂಸ್ಥೆಯನ್ನೇ ರದ್ದುಪಡಿಸಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ವಿಧಾನಸಭೆ (ಮಾ.13): ‘ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಯಲು ಕಠಿಣ ಕಾನೂನು ರೂಪಿಸಿದ್ದೇವೆ. ಎಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದರೂ ಕೆಪಿಎಸ್‌ಸಿಯವರಿಗೆ ಭಯ ಇಲ್ಲದಂತಾಗಿದೆ. ಖಾಲಿ ಪತ್ರಿಕೆ ನೀಡಿದವರೂ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಪಿಎಸ್‌ಸಿ ಸಂಸ್ಥೆಯನ್ನೇ ರದ್ದುಪಡಿಸಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ. ಬಿಜೆಪಿ ಸದಸ್ಯ ವಿ.ಸುನಿಲ್‌ ಕುಮಾರ್‌ ಅವರು ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ನೇಮಕಾತಿ ಅವ್ಯವಹಾರಗಳ ಕುರಿತ ಅನುಮಾನಗಳ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಎಸ್‌. ಸುರೇಶ್ ಕುಮಾರ್‌, ಪ್ರತಿಪಕ್ಷ ನಾಯಕ ಆರ್. ಅಶೋಕ್‌ ದನಿಗೂಡಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ಕೆಪಿಎಸ್‌ಸಿ ಅವರಿಗೆ ಕಾನೂನಿನ ಭಯವೇ ಇಲ್ಲ. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಯಲು ವಿಧೇಯಕ ಮಾಡಿದ್ದೇವೆ. ಬಿಜೆಪಿ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣ ಬಳಿಕ ನಾವು ಬಿಲ್ ಮಾಡಿ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದರೆ 10 ಕೋಟಿ ರು. ದಂಡ, 10 ವರ್ಷ ಜೈಲು ವಿಧಿಸಲು ಕಾನೂನು ಮಾಡಿದ್ದೇವೆ. ಹೀಗಿದ್ದರೂ ಅವರಿಗೆ ಭಯವಿಲ್ಲ ಎಂದು ಕಿಡಿ ಕಾರಿದರು.

ನಾನು ಸಚಿವನಾಗಿ ಅಥವಾ ಸರ್ಕಾರದ ಪರ ಮಾತನಾಡುತ್ತಿಲ್ಲ. ಯುವಕರ ಪರವಾಗಿ ಮಾತನಾಡುತ್ತಿದ್ದೇನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆದರೆ, ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ. ಖಾಲಿ ಪತ್ರಿಕೆ ನೀಡಿದವರೂ ನೇಮಕ ಆಗುತ್ತಿದ್ದಾರೆ. ಹೀಗಾದರೆ ಕೆಪಿಎಸ್‌ ಯಾಕೆ ಬೇಕು? ಅವರಿಗೆ ಕಾನೂನು, ನ್ಯಾಯಾಂಗ, ಕಾರ್ಯಾಂಗ ಯಾವುದರ ಬಗ್ಗೆಯೂ ಭಯವಿಲ್ಲ. ಹೀಗಾಗಿ ಕೆಪಿಎಸ್ಸಿ ರದ್ದುಪಡಿಸಬೇಕು ಎಂದು ಆಗ್ರಹ ಮಾಡಿದರು.

ಸರ್ಕಾರದ ನಿಯಂತ್ರಣದಲ್ಲಿ ಅಭ್ಯರ್ಥಿಗಳ ಕನಸು ಹತ್ಯೆ: ವಿಷಯ ಪ್ರಸ್ತಾಪಿಸಿದ ಸುನಿಲ್‌ಕುಮಾರ್, ಲಕ್ಷಾಂತರ ಮಂದಿ ಸರ್ಕಾರಿ ಉದ್ಯೋಗಕ್ಕಾಗಿ ಹೋಗಬೇಕು ಎಂಬ ಗುರಿಯೊಂದಿಗೆ ಹಗಲಿರುಳು ಶ್ರಮ ಹಾಕುತ್ತಿದ್ದಾರೆ. ಆದರೆ ಕೆಪಿಎಸ್‌ಸಿ ವ್ಯವಸ್ಥೆಯು ಸರ್ಕಾರಿ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಕನಸು ಹತ್ಯೆ ಮಾಡುವ ಕೇಂದ್ರ ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಈ ಸಂಸ್ಥೆಯಲ್ಲಿ ಬದಲು ಭ್ರಷ್ಟಾಚಾರ, ಅವ್ಯವಹಾರ ಮಿತಿ ಮೀರಿದೆ. ಇದೊಂದು ನಿಗೂಢ ಸಂಸ್ಥೆಯಾಗಿದ್ದು ಪರೀಕ್ಷೆ ರಹಸ್ಯ, ಫಲಿತಾಂಶ ಶಂಕಿತ ಎಂಬಂತಾಗಿದೆ. 5,000 ಜನರಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಆಗಲ್ಲ ಅಂತಾದರೆ ಆ ಸಂಸ್ಥೆ ಯಾಕೆ ಬೇಕು? ಕೆಪಿಎಸ್‌ಸಿಯಿಂದ ನೇಮಕವಾದವರನ್ನೆಲ್ಲಾ ಅನುಮಾನದಿಂದ ನೋಡುವಂತಾಗಿದೆ ಎಂದು ಕಿಡಿಕಾರಿದರು.

ನೇಮಕಾತಿ ಬಗ್ಗೆ ಅನುಮಾನ ಬಗೆಹರಿಸಿ: ಇತ್ತೀಚೆಗೆ ನೇಮಕಾದ ಗೆಜೆಟೆಡ್‌ ಪ್ರೊಬೆಷನರ್ಸ್‌ ಹುದ್ದೆಗಳ ನೇಮಕದಲ್ಲಿ ಅಕ್ರಮದ ಆರೋಪಗಳು ಕೇಳಿ ಬಂದಿವೆ. ಒಂದೇ ಕೊಠಡಿಯಲ್ಲಿ ಪರೀಕ್ಷೆ ಪಡೆದ 12 ಮಂದಿ ಅರ್ಹತೆ ಪಡೆದಿದ್ದಾರೆ. ಒಂದೇ ಕ್ರಮ ಸಂಖ್ಯೆಯವರು ಉತ್ತೀರ್ಣರಾಗಿದ್ದಾರೆ. ಕೆಪಿಎಸ್‌ಸಿ ಸದಸ್ಯರ ಮಕ್ಕಳು, ವಿಧಾನಸೌಧದ ನಿವೃತ್ತ ಅಧಿಕಾರಿಯ ಕುಟುಂಬದಲ್ಲಿ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ.

2025ರ ಮೇ 7 ರಂದು ಬೆಳಗ್ಗೆ ಅಭ್ಯರ್ಥಿಗಳಿಗೆ ವಿತರಿಸುವ 9 ಗಂಟೆಗೆ ಮೊದಲೇ ಸೀಲ್‌ ತೆಗೆದಿರುವ ಬಗ್ಗೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಲಿಖಿತ ದೂರು ಸಹ ನೀಡಿದ್ದರು. ಆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಇದರಿಂದ ಕೆಪಿಎಸ್‌ಸಿಯಲ್ಲಿ ನೇಮಕವಾದ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ. ಈ ಬಗ್ಗೆ ಸರ್ಕಾರ ಗೊಂದಲ ಬಗೆಹರಿಸಬೇಕು. ಪ್ರೊಬೆಷನರಿ ಪರೀಕ್ಷೆ ಅಕ್ರಮದ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ್ದರು? ವರದಿಯಲ್ಲಿ ಏನು ಉತ್ತರ ನೀಡಿದ್ದಾರೆ ಎಂಬುದು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕೆಪಿಎಸ್ಸಿ ಶುದ್ಧೀಕರಣ ಆಗಬೇಕು

ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಸೇವೆ ತಪ್ಪಿ ಹೋಗಿದೆ. ಕೇವಲ ಪಬ್ಲಿಕ್‌ ಕಮಿಷನ್‌ ಆಗಿ ಉಳಿದುಕೊಂಡಿದೆ. ಅಲ್ಲಿ ಬರೀ ಹೊಟ್ಟೆ ತುಂಬಿದ ಜನರಿದ್ದು, ಉದ್ಯೋಗ ಸೌಧ ನಿರುದ್ಯೋಗ ಸೌಧ ಆಗಿದೆ. ನೇಮಕಾತಿಯಲ್ಲಿ ಬಹಳ ವಿಳಂಬವಾಗುತ್ತಿದ್ದು, ಹೀಗಾಗಿ ಶಾಶ್ವತ ಮೌಲ್ಯಮಾಪಕರ ಮಂಡಳಿ ರಚಿಸಿ ಅಲ್ಲಿಂದಲೇ ಮೌಲ್ಯಮಾಪಕರನ್ನು ಬಳಸಿಕೊಳ್ಳಬೇಕು. ಕೆಪಿಎಸ್ಸಿ ಶುದ್ಧೀಕರಣ ಆಗಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಸವನಗುಡಿ ಸುಬ್ರಮಣ್ಯ ಮಠಕ್ಕೆ ಜಾಗದ ಗುತ್ತಿಗೆ ಮುಂದುವರಿಕೆ: ಸಚಿವ ರಾಮಲಿಂಗಾರೆಡ್ಡಿ
ಗೋಕಾಕ- ಧಾರವಾಡ ರಸ್ತೆ ಚತುಷ್ಪಥವಾಗಿಸಿ: ಸಂಸದ ಜಗದೀಶ ಶೆಟ್ಟರ್ ಮನವಿ