ಕೆಪಿಎಸ್‌ ಶಾಲೆಗಾಗಿ ಯಾವುದೇ ಕನ್ನಡ ಶಾಲೆ ಮುಚ್ಚುವುದಿಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

Published : Dec 09, 2025, 05:46 AM IST
Madhu bangarappa

ಸಾರಾಂಶ

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಶಾಲೆ ಆರಂಭಿಸಲು ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.

ಸುವರ್ಣಸೌಧ (ಡಿ.09): ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌) ಶಾಲೆ ಆರಂಭಿಸಲು ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ, ಕನ್ನಡ ಶಾಲೆಗಳನ್ನು ಮುಚ್ಚುವುದಾಗಿ ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಬರುವ ಸುದ್ದಿ ಸರಿಯಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದರು.

ಡಾ. ಚಿದಾನಂದಗೌಡ ಹಾಗೂ ಡಾ. ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೆ ಯಾವುದೇ ಶಾಲೆ ಮುಚ್ಚುವುದಾಗಿ ತಾವು ಹೇಳಿಲ್ಲ. ಗ್ರಾಮೀಣ ಭಾಗದ ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯಬೇಕು, ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣ ಒಂದೇ ಸೂರಿನಡಿ ಸಿಗಬೇಕು ಎಂಬ ಕಾರಣದಿಂದ ಕೆಪಿಎಸ್‌ ಶಾಲೆ ಆರಂಭಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 309 ಕೆಪಿಎಸ್‌ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್‌ ಶಾಲೆಗಳಾಗಿ ಉನ್ನತೀಕರಿಸಲಾಗುತ್ತಿದೆ. ಕೆಪಿಎಸ್‌ ಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ಹಾಗೂ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಒದಗಿಸಲಾಗಿದೆ. ಜತೆಗೆ ಕೌಶಲ ಅಭಿವೃದ್ಧಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಕೆಪಿಎಸ್‌ ಶಾಲೆಯನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮ ವಹಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕಂಪ್ಯೂಟರ್‌ ಶಿಕ್ಷಣ ಪರಿಚಯ, ಭವಿಷ್ಯದ ವೃತ್ತಿಪರ ತರಬೇತಿಗಳನ್ನು 6ನೇ ತರಗತಿಯಿಂದ ಆರಂಭಿಸಲು, ಪಠ್ಯಕ್ರಮವನ್ನು ಉದ್ಯಮ ಪಾಲುದಾರರ ಸಹಾಯದಿಂದ ವಿನ್ಯಾಸಗೊಳಿಸಿ ಜಂಟಿ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಖಾಸಗಿ ಶಾಲೆ ಮಾನ್ಯತೆ ಬಗ್ಗೆ ವಿಶೇಷ ಸದನ ಸಮಿತಿ

ರಾಜ್ಯದ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ವಿಶೇಷ ಸದನ ಸಮಿತಿ ರಚಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಿಯಮ 330ರ ಮೇರೆಗೆ ಕಾಂಗ್ರೆಸ್‌ ಸದಸ್ಯ ಪುಟ್ಟಣ್ಣ ಈ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಮಾನ್ಯತೆ ನವೀಕರಣ ಸಂಬಂಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳೊಂದಿಗೆ ಚರ್ಚಿಸಲಾಗಿದೆ. ಈ ಹಿಂದೆ ಅನುದಾನ/ಅನುದಾನರಹಿತ ಶಾಲೆಗಳಲ್ಲಿ ರಾಜ್ಯದ ಸಾಕಷ್ಟು ಮಂದಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಈ ಶಾಲೆಗಳ ಸೇವೆಯನ್ನು ಪರಿಗಣಿಸಲಾಗಿದೆ ಎಂದರು.

ಮಾನ್ಯತೆ ನವೀಕರಣಕ್ಕೆ ಈ ಹಿಂದೆ 62 ನಿಯಮ ರೂಪಿಸಲಾಗಿತ್ತು. ನಾನು ಸಚಿವನಾದ ಬಳಿಕ 48ಕ್ಕೆ ಇಳಿಕೆ ಮಾಡಿದ್ದೇನೆ. ಮಾನ್ಯತೆ ನವೀಕರಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ಗಮನಕ್ಕೆ ಬಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಸದನದ ಸದಸ್ಯರ ಒತ್ತಾಯದಂತೆ ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ವಿಶೇಷ ಸದನ ಸಮಿತಿ ವರದಿ ಬರುವವರೆಗೂ ಮಾನ್ಯತೆ ನವೀಕರಣ ಸಂಬಂಧ ಹೊರಡಿಸಿರುವ ಆದೇಶವನ್ನು ಅನುಷ್ಠಾನಕ್ಕೆ ತರುವುದಿಲ್ಲ. ಮಕ್ಕಳು ಹಾಗೂ ಶಾಲೆಗಳಿಗೆ ತೊಂದರೆಯಾಗದಂತೆ ನಮ್ಮ ಇಲಾಖೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ, ಕಾಂಗ್ರೆಸ್‌ ಸದಸ್ಯ ಪುಟ್ಟಣ್ಣ, ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ರೂಪಿಸಿರುವ ನಿಯಮಗಳು ಕಠಿಣವಾಗಿವೆ. ನವೀಕರಣ ಮಾಡುವ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸ್ಯಾಡಿಸ್ಟ್‌ಗಳು ಮತ್ತು ಭ್ರಷ್ಟಾಚಾರಿಗಳು ಸೇರಿ ನಿಯಮ ಮಾಡಿದಂತಿದೆ. ಮಾನ್ಯತೆ ನಿಯಮ ಸರಳೀಕರಣ ಮಾಡದಿದ್ದಲ್ಲಿ ಹಲವು ಖಾಸಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಇದರಿಂದ ಮಕ್ಕಳು ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಈ ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ರಚಿಸಬೇಕು. ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವಿಚಾರವಾಗಿ ಸದಸ್ಯರಾದ ಶಶೀಲ್‌ ಜಿ.ನಮೋಶಿ, ಎಸ್‌.ವಿ.ಸಂಕನೂರ, ಎಸ್.ಎಲ್.ಭೋಜೇಗೌಡ, ರಾಮೋಜಿ, ಶ್ರೀನಿವಾಸ್, ರಮೇಶ್‌ ಬಾಬು, ಹನುಮಂತ ನಿರಾಣಿ, ಜಬ್ಬಾರ್‌, ಹೇಮಲತಾ ನಾಯಕ್‌, ಬಲ್ಕಿಸ್‌ ಬಾನು ಮಾತನಾಡಿದರು. ಸದನ ಸಮಿತಿ ರಚನೆಗೆ ಒಕ್ಕೊರಲಿನಿಂದ ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಬದಲಿಗೆ ವರಿಷ್ಠರು ಸದ್ಯ ಒಪ್ಪಿಲ್ಲ : ಯತೀಂದ್ರ
ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್