ದ್ವೇಷದ ಕೇಸಿಂದ ಕಾಂಗ್ರೆಸ್‌ ಧ್ವನಿ ಅಡಗಿಸಲು ಅಸಾಧ್ಯ: ಡಿಕೆಶಿ

By Kannadaprabha News  |  First Published Jun 22, 2022, 9:18 AM IST

*  ರಾಹುಲ್‌ ಗಾಂಧಿ ಅವರನ್ನು 40 ತಾಸು ವಿಚಾರಣೆ ಮಾಡುವುದೇನಿತ್ತು? 
*  ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ
*  ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ
 


ನವದೆಹಲಿ(ಜೂ.22):  ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್‌ ಪಕ್ಷದ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

ನವದೆಹಲಿಯಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪೂರ್ವಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ ಎಂದು ಹೇಳಿದರು.

Tap to resize

Latest Videos

ಯಡಿಯೂರಪ್ಪ ವಿದೇಶ ಪ್ರವಾಸ, ಸಿದ್ದರಾಮಯ್ಯ ದಿಢೀರ್ ದಿಲ್ಲಿಗೆ..!

ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರು, ಪರಿಷತ್‌ ಸದಸ್ಯರು ಸೇರಿದಂತೆ ಎಲ್ಲ ಶಾಸಕರನ್ನು ದೆಹಲಿಗೆ ಬರುವಂತೆ ಕರೆ ನೀಡಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮ ಸಂಸದರು ಈಗಾಗಲೇ ಬಂದು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಬಂಧಿಸಿ ಮೂರು ದಿನ ದೆಹಲಿಯ ಹೊರಗಿರುವ ಠಾಣೆಯಲ್ಲಿ ಇಟ್ಟಿದ್ದರು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಸಂಸದರನ್ನು ಪೊಲೀಸರು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ನೋಡಿದ್ದೇವೆ. ನಮ್ಮ ನಾಯಕರು, ಯುವ ಕಾಂಗ್ರೆಸ್‌ ಅಧ್ಯಕ್ಷರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯುವ ಕಾಂಗ್ರೆಸ್‌ ಅಧ್ಯಕ್ಷರು ಹೋರಾಟ ಮಾಡದೇ ಇನ್ಯಾರು ಮಾಡಲು ಸಾಧ್ಯ ಎಂದು ಹೇಳಿದರು.

ಇನ್ನು ರಾಹುಲ್‌ ಗಾಂಧಿ ಅವರನ್ನು 40 ತಾಸು ವಿಚಾರಣೆ ಮಾಡುವುದೇನಿತ್ತು? ಇದರಲ್ಲಿ ಷಡ್ಯಂತ್ರವಿದೆ. ಸೋನಿಯಾ ಗಾಂಧಿ ಅವರು ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರನ್ನು 23 ರಂದು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆ ಮಾಡುತ್ತಿರುವ ಸಮಯ, ವಿಧಾನ ನೋಡಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುತ್ತಿದ್ದಾರೆ ಎಂದರು.

ಗಾಂಧಿ ಕುಟುಂಬದವರು ಕಾನೂನಿಗೆ ಅತೀತರೇ ಎಂಬ ಬಿಜೆಪಿ ವಾದದ ಕುರಿತು ಕೇಳಿದ ಪ್ರಶ್ನೆಗೆ, ಇದು ಆದಾಯ ತೆರಿಗೆ ಇಲಾಖೆ ವಿಚಾರವೇ ಹೊರತು, ಇದರಲ್ಲಿ ಹಣಕಾಸು ಅವ್ಯವಹಾರ ಏನಿದೆ? ಹಣ ಸಿಕ್ಕಿದೆಯೇ ಎಂದು ಕೇಳಿದರು.
ರಾಹುಲ್‌ ಗಾಂಧಿ ಅವರ ಘನತೆ ಹೆಚ್ಚಿಸಲು ಈ ಹೋರಾಟ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ರಾಹುಲ್‌ ಗಾಂಧಿ ಅವರು ಈ ದೇಶ ಒಂದು ಮಾಡಲು ಭಾರತ್‌ ಜೋಡೋ ಯಾತ್ರೆ ಮಾಡಲು ಹೊರಟಿದ್ದಾರೆ. ಅದು ನಡೆದರೆ ಪಕ್ಷಕ್ಕೆ ಶಕ್ತಿ ಬರಲಿದೆ. ಹೀಗಾಗಿ ಇದನ್ನು ತಡೆಯಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದರು.
 

click me!