ಮಾಜಿ ಸಚಿವ ದೇಶಪಾಂಡೆ ವಿರುದ್ಧ ಡಿಕೆಶಿ ಬಹಿರಂಗ ಆಕ್ರೋಶ

By Govindaraj SFirst Published Sep 17, 2022, 5:16 AM IST
Highlights

ರಾಹುಲ್‌ಗಾಂಧಿ ಅವರ ಪಾದಯಾತ್ರೆಗೆ ಒಂದು ದಿನ 5 ಸಾವಿರ ಜನರನ್ನು ಕಳುಹಿಸಲು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಕೇಳಿದರೆ ಆಗಲ್ಲ ಎನ್ನುತ್ತಾರೆ. ಐದು ವರ್ಷದಲ್ಲಿ ಒಂದು ದಿನವಾದರೂ ರಾಹುಲ್‌ಗಾಂಧಿ ಜತೆ ಕೆಲಸ ಮಾಡಲಾಗಲ್ಲ ಎಂದರೆ ಏನು ಮಾಡಬೇಕು.

ಬೆಂಗಳೂರು (ಸೆ.17): ‘ರಾಹುಲ್‌ಗಾಂಧಿ ಅವರ ಪಾದಯಾತ್ರೆಗೆ ಒಂದು ದಿನ 5 ಸಾವಿರ ಜನರನ್ನು ಕಳುಹಿಸಲು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಕೇಳಿದರೆ ಆಗಲ್ಲ ಎನ್ನುತ್ತಾರೆ. ಐದು ವರ್ಷದಲ್ಲಿ ಒಂದು ದಿನವಾದರೂ ರಾಹುಲ್‌ಗಾಂಧಿ ಜತೆ ಕೆಲಸ ಮಾಡಲಾಗಲ್ಲ ಎಂದರೆ ಏನು ಮಾಡಬೇಕು. ಈ ವಿಚಾರದಲ್ಲಿ ಯಾವ ಶಾಸಕರಿಗೂ ವಿನಾಯಿತಿ ನೀಡುವುದಿಲ್ಲ’ ಎಂದು ದೇಶಪಾಂಡೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್‌ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಕೆಲವು ಶಾಸಕರಿದ್ದಾರೆ. 1 ದಿನ ಬಂದು ಕೆಲಸ ಮಾಡುವುದಕ್ಕೂ ಆಗಲ್ಲ ಎನ್ನುತ್ತಾರೆ. ನಾನು ದೇಶಪಾಂಡೆ ಅವರಿಗೆ 1 ದಿನ ಜನರನ್ನು ಕಳುಹಿಸಲು ಕೇಳಿದೆ. ಅವರು ಆಗುವುದಿಲ್ಲ ಎಂದರು. 5 ವರ್ಷದಲ್ಲಿ ಒಂದು ದಿನ ಆದರೂ ರಾಹುಲ್‌ ಗಾಂಧಿ ಜತೆ ಕೆಲಸ ಮಾಡಲು ಆಗಲ್ಲ ಎಂದರೆ ಏನು ಮಾಡುವುದು?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅ.2ರಂದು ಬದನವಾಳು ಗ್ರಾಮದಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಗಾಂಧಿ ಜಯಂತಿ: ಡಿಕೆಶಿ

‘ಇನ್ನು ಯಾವ ಶಾಸಕರಿಗೂ ವಿನಾಯಿತಿ ನೀಡಲು ಆಗುವುದಿಲ್ಲ. ಪ್ರತಿ ದಿನ ಇಬ್ಬರು ಶಾಸಕರನ್ನು ನಿಗದಿ ಮಾಡುತ್ತೇವೆ. ಅವರನ್ನು ಜನರನ್ನು ಕರೆ ತರಬೇಕು. ಯಾರು ಮುಂದಿನ ಚುನಾವಣೆಗೆ ಆಕಾಂಕ್ಷಿ ಇದ್ದಾರೋ ಅವರೂ ಬರಬೇಕು. ನೀವು ಕೆಲಸ ಮಾಡಿ ನಿಮ್ಮ ಫೋಟೋ ಹಾಕಿಕೊಳ್ಳಿ. ನನ್ನ ಅಥವಾ ಸಿದ್ದರಾಮಯ್ಯ ಫೋಟೋ ಹಾಕಬೇಡಿ’ ಎಂದರು. ವೇದಿಕೆ ಮೇಲೆ ದೇಶಪಾಂಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಿವಕುಮಾರ್‌ ಬಳಿಕ ಕೆಳಗೆ ಬಂದು, ದೇಶಪಾಂಡೆ ಪಕ್ಕದಲ್ಲೇ ಕುಳಿತಿದ್ದರೂ ಏನೂ ಮಾತನಾಡಲಿಲ್ಲ.

ಕಾರ್ಯಕರ್ತನ ಮೇಲೂ ಡಿಕೆಶಿ ಗರಂ: ಕಾರ್ಯಕ್ರಮದ ವೇಳೆ ಕುರ್ಚಿಗಳಿದ್ದರೂ ನಿಂತಿದ್ದ ಕಾರ್ಯಕರ್ತನನ್ನೂ ಡಿ.ಕೆ. ಶಿವಕುಮಾರ್‌ ತರಾಟೆಗೆ ತೆಗೆದುಕೊಂಡರು. ‘ಹೇ ನೀನು ಬಿಜೆಪಿ ಸೇರಿದಿಯಾ, ದಳ ಸೇರಿದಿಯಾ? ಕುರ್ಚಿ ಕೊಟ್ಟಿರುವುದು ಕುಳಿತುಕೊಳ್ಳಲು. ಕೊಟ್ಟಿರುವ ಅವಕಾಶ ಉಪಯೋಗಿಸಿಕೊಳ್ಳುವ ಯೋಗ್ಯತೆ ಇಲ್ಲ ನಿಮಗೆ’ ಎಂದು ಕಿಡಿ ಕಾರಿದರು.

ಇದು ED ನೋಟಿಸ್ ಅಲ್ಲ, ಬಿಜೆಪಿಯ ಬೆದರಿಕೆ ಪತ್ರ: ಡಿಕೆ ಸುರೇಶ್ ವ್ಯಂಗ್ಯ

ಜನ ಕರೆತರಲು ಆಗಲ್ಲ ಎಂದಿಲ್ಲ: ಶಿವಕುಮಾರ್‌ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ‘ಅವರ (ಶಿವಕುಮಾರ್‌) ವೇಗ ತುಂಬಾ ಇದೆ ಬಿಡಿ. ನಾನು 50 ವರ್ಷದಿಂದ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಯವ ಕಾಂಗ್ರೆಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನಮ್ಮ ಕೆಲಸ ನಾವು ಮಾಡಿದ್ದೇವೆ’ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, ‘ನಾನು ಜನರನ್ನು ಕರೆತರಲು ಆಗುವುದಿಲ್ಲ ಎಂದು ಹೇಳಿಲ್ಲ. ನಮ್ಮ ಜಿಲ್ಲೆಯಿಂದ ಐದು ಸಾವಿರ ಜನರನ್ನು ಒಗ್ಗೂಡಿಸುವುದು ಕಷ್ಟಎಂದು ಹೇಳಿದ್ದೆ. ಆದರೆ, ಎಲ್ಲರೂ ಸೇರಿ ಪಕ್ಷ ಕಟ್ಟಬೇಕು ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆ ತಪ್ಪೇನಲ್ಲ’ ಎಂದೂ ಹೇಳಿದರು.

click me!