ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣಾ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿವೆ| ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ| ಸರ್ಕಾರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲ|
ಬೆಂಗಳೂರು(ಆ.09): ರಾಜ್ಯದಲ್ಲಿ ಉಂಟಾಗಿರುವ ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಕಾಂಗ್ರೆಸ್ ಶೀಘ್ರವೇ ನಾಲ್ಕರಿಂದ ಐದು ತಂಡ ರಚನೆ ಮಾಡಿ ಸ್ಥಳ ಅಧ್ಯಯನಕ್ಕೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಎದುರಿಸುತ್ತಿರುವ ಹುಣಸೂರಿನಲ್ಲಿ ಪರಿಸ್ಥಿತಿ ಅವಲೋಕಿಸಲು ಹೊರಡುವ ಮುನ್ನ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ನೆರೆ ಪೀಡಿತರ ಸಮಸ್ಯೆ ನಿವಾರಿಸುವ ಹೊಣೆಯನ್ನು ಸಂಪುಟದ ಹಿರಿಯ ಸಚಿವರು ವಹಿಸಬೇಕಿತ್ತು. ಆದರೆ ಅವರ ಸಂಭ್ರಮವೇ ಬೇರೆ ಇದೆ. ಸಮಾಜದಲ್ಲಿ ಅಸೂಯೆ, ದ್ವೇಷವನ್ನು ಬಿತ್ತುವ, ಸಮಾಜ ಒಡೆಯುವ ಹೇಳಿಕೆ ನೀಡುವುದರಲ್ಲಿ ಅವರು ನಿರತರಾಗಿದ್ದಾರೆ’ ಎಂದು ಟೀಕಿಸಿದ್ದಾರೆ.
ಸರ್ಕಾರ ನೆಗೆಟಿವ್ ಇದ್ದವರಿಗೆ ಪಾಸಿಟಿವ್ ತೋರಿಸಿ ಹಣ ವಸೂಲಿ ಮಾಡ್ತಿದೆ: ಡಿಕೆಶಿ
ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣಾ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿವೆ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಸರ್ಕಾರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಲು ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಹಾಗೂ ಇತರೆ ಮುಖಂಡರುಗಳು ಒಳಗೊಂಡಂತೆ 4-5 ತಂಡಗಳನ್ನು ರಚನೆ ಮಾಡಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು ಎಂದರು.
ಸರ್ಕಾರ ಕೊಟ್ಟ ಮಾತಿನಂತೆ ನಡೆದಿಲ್ಲ:
ಈಗಷ್ಟೇ ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಸರ್ಕಾರ 7.5 ಲಕ್ಷ ಚಾಲಕರಿಗೆ ಹಣ ನೀಡುವುದಾಗಿ ಘೋಷಿಸಿತ್ತು. ಈವರೆಗೂ 1.20 ಲಕ್ಷ ಚಾಲಕರಿಗೆ ಮಾತ್ರ ಕೊಟ್ಟು ದಾಖಲೆ ನೀಡಿ ಎಂದು ಹೇಳಿ ಮುಂದಕ್ಕೆ ಹಾಕುತ್ತಿದೆ. ಆಶಾ ಕಾರ್ಯಕರ್ತೆಯರಾಗಲಿ, ಸವಿತಾ ಸಮಾಜದವರಾಗಲಿ, ನೇಕಾರರಾಗಿರಲಿ ಯಾರಿಗೂ ಹಣ ತಲುಪಿಲ್ಲ. 11 ನೇಕಾರರು ಈವರೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಬರೀ 2 ಸಾವಿರ ಕೊಡುವುದಾಗಿ ಘೋಷಿಸಿದ ಸರ್ಕಾರ ಅದನ್ನೂ ಕೊಟ್ಟಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನ್ಯಾಯ ಕೊಡುವವರೆಗೂ ಬಿಡಲ್ಲ:
ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಉತ್ತರ ಕೊಡಿ, ಲೆಕ್ಕ ಕೊಡಿ ಆಂದೋಲನವನ್ನು ನಾವು ನಿಲ್ಲಿಸಿಲ್ಲ. ಜನರಿಗೆ ನ್ಯಾಯ ಸಿಗುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ. ಲೆಕ್ಕ ಕೊಡಿ ಅಂತ ಕೇಳಿದ್ದೇವೆ, ಉತ್ತರ ಕೊಡಿ ಅಂತ ಕೇಳಿದ್ದೇವೆ, ನ್ಯಾಯ ಕೊಡಿ ಅಂತ ಕೇಳುತ್ತೇವೆ ಎಂದು ಹೇಳಿದರು.
‘ಡಿಸಿಎಂ ಅಶ್ವತ್ಥನಾರಾಯಣ ಆಸ್ಪತ್ರೆಗೆ ತೋರಿಸಿಕೊಳ್ಳಲಿ’
ವಿರೋಧ ಪಕ್ಷವು ‘ವಿರೋಧ’ ಮಾಡುವ ಕೆಲಸದಲ್ಲೇ ಇದೆ ಎಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಆರೋಗ್ಯ ಸರಿ ಇಲ್ಲ ಎನಿಸುತ್ತದೆ. ಅವರು ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಪ್ರವಾಹ ವಿಚಾರವಾಗಿ ನಮ್ಮ ಪಕ್ಷದ ಯಾವುದೇ ನಾಯಕರು ಹೇಳಿಕೆ ನೀಡಿಲ್ಲ. ಕುಂಬಳಕಾಯಿ ಕಳ್ಳ ಅಂದರೆ ಅವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದ ಹೇಳಿಕೆ ನೀಡಿದ್ದಾರಾ? ನಾನು ಹೇಳಿಕೆ ನೀಡಿದ್ದೇನಾ? ನಾನು ಕಾಂಗ್ರೆಸ್ ಪಕ್ಷದ ಧ್ವನಿ, ಸಿದ್ದರಾಮಯ್ಯ ವಿರೋಧಪಕ್ಷದ ಧ್ವನಿ. ನಾವ್ಯಾರೂ ಮಾತನಾಡಿಲ್ಲ. ಅವರ ಪಕ್ಷದವರೇ ಮುಖ್ಯಮಂತ್ರಿಗಳಿಗೆ ಅಗೌರವ ತೋರುತ್ತಿದ್ದಾರೆ ಎಂದರು.