‘ಕೆಲವು ಮೆಂಟಲ್‌ಗಳು ಈಗ ಮನ ಬಂದಂತೆ ಮಾತಾಡ್ತಾರೆ’| ರಮೇಶ ಜಾರಕಿಹೊಳಿ ಬಗ್ಗೆ ಡಿಕೆಶಿ ಪರೋಕ್ಷ ಕಿಡಿ
ಬೆಂಗಳೂರು(ಜೂ.06): ‘ಕಾಂಗ್ರೆಸ್ ಪಕ್ಷದ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಕೆಲವು ಮೆಂಟಲ್‌ಗಳು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ಹಾಗೂ ಶಾಸಕರನ್ನು ಕಡಲೆಪುರಿ ಎಂದು ಭಾವಿಸಿ 20-30 ಸಂಖ್ಯೆಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 20 ಮಂದಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪರೋಕ್ಷವಾಗಿ ಕಿಡಿ ಕಾರಿದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟದ ಮಧ್ಯೆ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್..!
‘ಸಂಖ್ಯೆಗಳ ಹೆಸರಿನಲ್ಲಿ ಶಾಸಕರ ಬಗ್ಗೆ ಮಾತನಾಡಿ ನಮ್ಮ ಶಾಸಕರಿಗೆ ಅಗೌರವ ತೋರುವುದು ಬೇಡ. ಯಾವ ಸಚಿವ ಯಾವ ಹೇಳಿಕೆ ನೀಡುತ್ತಿದ್ದಾರೆ. ಯಾವ ಹೋಟೆಲ್‌ನಲ್ಲಿ ಯಾರು ಸಭೆ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ. ಗುರುವಾರ ರಾತ್ರಿ ಯಾರು, ಎಲ್ಲಿ ಏನು ಸಭೆ ನಡೆಸಿದ್ದಾರೆ ಎಂಬ ಬಗ್ಗೆಯೂ ನಾವು ಗಮನಿಸುತ್ತಿದ್ದೇವೆ. ನಾವು ಸುಮ್ಮನೆ ಕೂತಿಲ್ಲ’ ಎಂದು ಹೇಳಿದರು. ‘ನಮಗೆ ಬೇರೆ ಪಕ್ಷದವರ ವಿಚಾರ ಬೇಡ. ನಾವುಂಟು ನಮ್ಮ ಮನೆ ಉಂಟು, ಶಾಸಕರುಂಟು ಎಂದು ಸುಮ್ಮನಿದ್ದೇವೆ. ಹೀಗಾಗಿ ಬೇರೆಯವರ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದೇನೆ’ ಎಂದರು.
ಶಾಲೆ ತೆರೆಯುವ ಬಗ್ಗೆ ಅಭಿಪ್ರಾಯ ತಿಳಿಸಿದ್ದೇನೆ:
‘ಕೊರೋನಾ ಹಿನ್ನೆಲೆಯಲ್ಲಿ ಶಾಲೆ ಪುನರ್‌ಆರಂಭದ ಬಗ್ಗೆ ಸಚಿವ ಎಸ್. ಸುರೇಶ್‌ಕುಮಾರ್ ಅವರು ಕರೆ ಮಾಡಿದ್ದರು. ನಾನು ಅವರಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪ್ರತಿ ಪೋಷಕರಿಗೂ ಅವರ ಮಕ್ಕಳ ವಿಚಾರವಾಗಿ ಆತಂಕವಿರುತ್ತದೆ. ಶಿಕ್ಷಣ ಸಂಸ್ಥೆಗಳು ಕೂಡ ಪಾಠದ ಬಗ್ಗೆ ಜವಾಬ್ದಾರಿ ಹೊಂದಿರುತ್ತಾರೆ. ಹೀಗಾಗಿ ನೀವು ಪೋಷಕರು, ಶಾಲೆಗಳ ಜೊತೆ ಚರ್ಚಿಸಿ ಎಂದು ಹೇಳಿದ್ದೇನೆ. ಸರ್ಕಾರದ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಲು ಇಚ್ಛಿಸುವುದಿಲ್ಲ’ ಎಂದು ಹೇಳಿದರು.