* ಸ್ವಪಕ್ಷೀಯರನ್ನೇ ತಿವಿದ ಕರಡಿ: ವಿಡಿಯೋ ವೈರಲ್
* ಕಾರಟಗಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಘಟನೆ
* ಮುಜುಗರ ಅನುಭವಿಸಿದ ಸ್ವಪಕ್ಷೀಯರು
ಕೊಪ್ಪಳ(ಮೇ.12): ಕಾರಟಗಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ(Sanganna Karadi) ಅವರು ಸ್ವಪಕ್ಷೀಯರಿಗೆ ತಿವಿದಿರುವುದು ಮತ್ತು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೆಸರಿನಲ್ಲಿಯೇ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಮೂರ್ಖತನ ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅಂಥ ನಾಯಕರು ಸಿಕ್ಕಿರುವುದು ನಮ್ಮ ಸೌಭಾಗ್ಯ. ಆದರೆ, ಹಾಗಂತ ಅವರನ್ನೇ ಮುಂದಿಟ್ಟುಕೊಂಡು ಚುನಾವಣೆ(Election) ಎದುರಿಸುವುದಲ್ಲ. ನಾವೂ ತಯಾರಾಗಬೇಕು. ಚುನಾವಣೆ ಗೆಲ್ಲುವುದು ಅಷ್ಟುಸುಲಭ ಅಲ್ಲ. ಅದನ್ನು ಗೆಲ್ಲಲು ತಂತ್ರಗಾರಿಕೆ ಬೇಕು. ಕೇವಲ ರಾಷ್ಟ್ರೀಯ ನಾಯಕರ ಹೆಸರು ಹೇಳಿ ಗೆಲ್ಲುತ್ತೇವೆ ಎನ್ನುವುದು ಹುಚ್ಚುತನವಾಗುತ್ತದೆ. ಜನರ ಸೇವೆ ಮಾಡಬೇಕು. ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಕೇವಲ ಮದುವೆ, ಮುಂಜಿಗಳಿಗೆ ಓಡಾಡಿದರೆ ಸಾಲದು. ಇದರಿಂದ ಕಾರ್ಯಕರ್ತರ ನೋವು ಅರ್ಥವಾಗುವುದಿಲ್ಲ ಎಂದು ಹಿತವಚನ ನುಡಿದಿದ್ದಾರೆ.
ಕಾಂಗ್ರೆಸ್‌ನಲ್ಲಿರುವ(Congress) ಬಸವರಾಜ ರಾಯರಡ್ಡಿ, ಮಾಜಿ ಸಂಸದರಾದ ಎಚ್.ಜಿ. ರಾಮುಲು ಅವರಾಗಲಿ ಆ ರೀತಿ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ಅವರನ್ನು ಜನರು ಗೆಲ್ಲಿಸಿಲ್ಲವೆ? ಅವರು ವಿರೋಧ ಪಕ್ಷದಲ್ಲಿದ್ದರೂ ಅವರ ಕುರಿತು ಹೇಳಿದರೆ ತಪ್ಪೇನೂ ಇಲ್ಲ ಎಂದರು.
Koppal: ಕುಡಿಯುವ ನೀರು ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು(Muslims) 45 ಸಾವಿರ ಇದ್ದಾರೆ ಹಾಗೂ ಕುರುಬರು 45 ಸಾವಿರ ಜನರು ಇದ್ದಾರೆ. ಅವರೆಲ್ಲ ಒಗ್ಗಟ್ಟಿದ್ದಾರೆ. ಹೀಗಾಗಿ ಅವರು ಗೆಲುವು ಸಾಧಿಸುತ್ತಾರೆ ಎನ್ನುವ ಮಾತನ್ನೂ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವುಗಳನ್ನು ಯಾರು ಅನುಷ್ಠಾನ ಮಾಡಬೇಕು ಎನ್ನುವ ಮೂಲಕ ಸ್ವಪಕ್ಷದವರನ್ನೇ ತಿವಿದರು. ಇದು ವೇದಿಕೆಯಲ್ಲಿಯೇ ಇದ್ದ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಶಾಸಕರಿಗೆ ಇರುಸುಮುರುಸು ಅನುಭವಿಸುವಂತಾಯಿತು.
ಹೈಕಮಾಂಡ್ ಅಂಗಳಕ್ಕೆ ವೈರಲ್ ವಿಡಿಯೋ
ಸಂಸದ ಸಂಗಣ್ಣ ಕರಡಿ ಅವರು ಸ್ವಪಕ್ಷಿಯರನ್ನೇ ತಿವಿದು ಮಾತನಾಡಿರವ ವಿಡಿಯೋ ಹೈಕಮಾಂಡ್(High Command) ಅಂಗಳಕ್ಕೂ ತಲುಪಿದೆ. ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿರುವ ರೀತಿಯ ಕುರಿತು ನಾನಾ ರೀತಿಯ ಚರ್ಚೆಗಳು ಆಗುತ್ತವೆ. ಕೆಲವರು ಸರಿಯಾಗಿಯೇ ಮಾತನಾಡಿದ್ದಾರೆ ಎನ್ನುವವರು ಇದ್ದಾರೆ ಮತ್ತು ಇನ್ನು ಕೆಲವರು ಯಾಕೆ ಗರಂ? ಇದರ ಹಿಂದೆ ಇರುವ ಉದ್ದೇಶವಾದರೂ ಏನು? ಎನ್ನುವ ಕುರಿತು ಚರ್ಚೆಯೂ ನಡೆದಿದೆ.