ದೆಹಲಿ ತಲುಪಿದ ಕೆಪಿಸಿಸಿ ಯೂತ್ ಕಾಂಗ್ರೆಸ್ ಗಲಾಟೆ; ದೀಪಿಕಾ ರೆಡ್ಡಿ ಸೇರಿ ನಾಲ್ವರಿಗೆ ಶೋಕಾಸ್ ನೋಟಿಸ್!

Published : May 19, 2026, 11:23 AM IST
Karnataka Youth Congress

ಸಾರಾಂಶ

ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತು ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬಣಗಳ ನಡುವಿನ ಜಗಳ ತಾರಕಕ್ಕೇರಿದ್ದು, ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗದ್ದಲ ಮತ್ತು ಶಿಸ್ತು ಉಲ್ಲಂಘನೆಗಾಗಿ ದೀಪಿಕಾ ರೆಡ್ಡಿ ಸೇರಿ ನಾಲ್ವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು (ಮೇ 19): ರಾಜ್ಯ ಯೂತ್ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬಣಗಳ ನಡುವೆ ನಡೆದ ಬೀದಿ ಜಗಳ ಈಗ ದೆಹಲಿ ಮೆಟ್ಟಿಲೇರಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗದ್ದಲ ಮತ್ತು ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಯೂತ್ ಕಾಂಗ್ರೆಸ್ (IYC), ದೀಪಿಕಾ ರೆಡ್ಡಿ ಸೇರಿದಂತೆ ನಾಲ್ವರು ಪ್ರಮುಖ ಪದಾಧಿಕಾರಿಗಳಿಗೆ ಅಧಿಕೃತವಾಗಿ 'ಶೋಕಾಸ್ ನೋಟಿಸ್' ಜಾರಿ ಮಾಡಿದೆ.

ರಾಷ್ಟ್ರೀಯ ನಾಯಕರಿಂದ ಖಡಕ್ ಎಚ್ಚರಿಕೆ:

ಭಾರತೀಯ ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಅವರು ಈ ನೋಟಿಸ್ ನೀಡಿದ್ದಾರೆ. 'ಸಂಘಟನೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಸಭೆಗಳಲ್ಲಿ ಅನಗತ್ಯ ಗದ್ದಲ ಸೃಷ್ಟಿಸಿರುವುದು ಮತ್ತು ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವಂತಹ ಪೂರ್ವನಿಯೋಜಿತ ಸಂಚು ರೂಪಿಸಿರುವುದು ನಿಮ್ಮ ನಡವಳಿಕೆಯಿಂದ ಕಂಡುಬಂದಿದೆ. ಇದು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ' ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಯಾರಿಗೆಲ್ಲಾ ನೋಟಿಸ್ ನೀಡಲಾಗಿದೆ?

ನೋಟಿಸ್ ನೀಡಿರುವ ಪಟ್ಟಿಯಲ್ಲಿ ಪ್ರಮುಖ ನಾಯಕರ ಹೆಸರುಗಳಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಘಟಕದಲ್ಲಿ ಸಂಚಲನ ಮೂಡಿಸಿದೆ.

  • ದೀಪಿಕಾ ರೆಡ್ಡಿ (ಉಪಾಧ್ಯಕ್ಷರು)
  • ಸಂದೀಪ್ (ಉಪಾಧ್ಯಕ್ಷರು)
  • ಮಂಜುನಾಥ್ ಚೆಟ್ಟಿ (ಉಪಾಧ್ಯಕ್ಷರು)
  • ನಿಖಿಲ್ ಕೊಂಡಜ್ಜಿ (ಪ್ರಧಾನ ಕಾರ್ಯದರ್ಶಿ)

24 ಗಂಟೆಯೊಳಗೆ ಉತ್ತರ ನೀಡಲು ಗಡುವು:

ಸಾಮಾನ್ಯವಾಗಿ ಇಂತಹ ನೋಟಿಸ್‌ಗಳಿಗೆ ವಾರದ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಈ ಪ್ರಕರಣದ ತೀವ್ರತೆಯನ್ನು ಗಮನಿಸಿರುವ ಹೈಕಮಾಂಡ್, ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ವಿವರಣೆ ನೀಡುವಂತೆ ಆದೇಶಿಸಿದೆ. 'ನಿಗದಿತ ಸಮಯದೊಳಗೆ ತೃಪ್ತಿದಾಯಕ ಉತ್ತರ ನೀಡಲು ವಿಫಲವಾದರೆ, ಯಾವುದೇ ಮುನ್ಸೂಚನೆ ನೀಡದೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು' ಎಂದು ನಿಗಮ್ ಭಂಡಾರಿ ಅವರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಗಲಾಟೆಯ ಹಿನ್ನೆಲೆ ಏನು?

ಕೆಲವು ದಿನಗಳ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಯೂತ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ಮಂಜುನಾಥ್ ಅವರು ಕೆಲವರನ್ನು ಹುದ್ದೆಗಳಿಂದ ಮುಕ್ತಗೊಳಿಸಿದ್ದರು. ಇದನ್ನು ಪ್ರಶ್ನಿಸಿ ದೀಪಿಕಾ ರೆಡ್ಡಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎರಡೂ ಬಣಗಳ ನಡುವೆ ತಳ್ಳಾಟ-ನೂಕಾಟ ನಡೆದು, ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದವು.

ಈಗ ಹೈಕಮಾಂಡ್ ನೇರವಾಗಿ ಮಧ್ಯಪ್ರವೇಶಿಸಿರುವುದು ಮಂಜುನಾಥ್ ಬಣಕ್ಕೆ ಮೇಲುಗೈ ತಂದುಕೊಟ್ಟಂತಾಗಿದ್ದು, ದೀಪಿಕಾ ರೆಡ್ಡಿ ಬಣವು ಈ ನೋಟಿಸ್‌ಗೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ: ದೀಪಿಕಾ ರೆಡ್ಡಿ ಗಂಭೀರ ಆರೋಪ!
ಕೆಪಿಸಿಸಿ ಕಚೇರಿಯಲ್ಲಿ 'ಕೈ' ಕಾರ್ಯಕರ್ತರ ರಣರಂಗ: ಯೂತ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಗದ್ದಲ, ತಳ್ಳಾಟ-ನೂಕಾಟ!