
ಬೆಂಗಳೂರು (ನ.01): ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಬಸವಣ್ಣ, ಕನಕದಾಸರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು ಅವರ ಹೆಸರು ನಾಮಕರಣ ಮಾಡುವ ಸಂಬಂಧ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟದ ಮುಂದೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ.
ಈ ಸಂಬಂಧ ಮುಖ್ಯಕಾರ್ಯದರ್ಶಿ ಅವರಿಗೆ ಟಿಪ್ಪಣಿ ನೀಡಿರುವ ಅವರು, ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರಾಗಿರುವ ವಿಶ್ವಗುರು-ಸಾಂಸ್ಕೃತಿಕ ನಾಯಕ ಬಸವಣ್ಣನವರು, ಶೂದ್ರ ಸಿದ್ಧಾಂತದ ಹರಿಕಾರರಾದ ಕನಕದಾಸರು, ಹಿಂದುಳಿದ ಸಮುದಾಯಗಳಿಗೆ ಚೈತನ್ಯ ನೀಡಿ ರಾಜ್ಯದ ಅಭಿವೃದ್ಧಿಗೆ ಚಲನಶೀಲತೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು ಅವರ ಹೆಸರುಗಳನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡುವ ಅಗತ್ಯವಿದೆ. ಈ ಕುರಿತು ಪರಿಶೀಲಿಸಿ ಸೂಕ್ತ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದ ಮುಂದೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಬೇಕೆಂಬ ಒತ್ತಾಯ ವಿವಿಧ ಸಂಘಟನೆಗಳಿಂದ ಬಹಳ ವರ್ಷಗಳಿಂದ ಇದೆ. ಇತ್ತೀಚೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕೂಡ ಜೆ.ಎಚ್.ಪಟೇಲರ ಕಾಲದಲ್ಲೇ ಈ ವಿವಿಗೆ ಬಸವಣ್ಣನವರ ಹೆಸರಿಡುವ ಚರ್ಚೆಯಾಗಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರಾದರೂ ಈ ವಿವಿಗೆ ಬಸವಣ್ಣನವರ ಹೆಸರಿಡಬೇಕೆಂದು ಒತ್ತಾಯಿಸಿದ್ದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರಿಡಬೇಕೆಂಬ ಬೇಡಿಕೆ ವಿವಿಧ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ. ಮೈಸೂರು ವಿಶ್ವವಿದ್ಯಾಲಯಕ್ಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹೆಸರು, ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕೆಂಬ ಒತ್ತಾಯಗಳು ಆಗಿಂದಾಗೆ ಕೇಳಿಬರುತ್ತಿವೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ವಿವಿಗಳಿಗೆ ಯಾವ ಮಹನೀಯರ ಹೆಸರಿಡಬೇಕೆಂದು ಸೂಚಿಸುತ್ತಾರೋ ಆ ಪ್ರಕಾರ, ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.