ರಾಜ್ಯ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಗಾಳಿಸುದ್ದಿಯಾಗಿದ್ದು, ಈ ಕುರಿತು ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಬೆಂಗಳೂರು (ಜ.06): ಮೂವರು ಉಪಮುಖ್ಯಮಂತ್ರಿಗಳ ನೇಮಕ ವಿಚಾರ ಗಾಳಿಸುದ್ದಿಯಾಗಿದ್ದು, ಈ ಕುರಿತು ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ನೇಮಕದ ಬಗ್ಗೆ ಸಚಿವರು ವೈಯಕ್ತಿಕ ಅಭಿಪ್ರಾಯವನ್ನು ಹೇಳಿರುತ್ತಾರೆ. ರಾಜಣ್ಣ ಅವರ ಹೇಳಿಕೆಯೂ ಅಷ್ಟೆ. ಅವರ ದೃಷ್ಟಿಯಲ್ಲಿ ಒಳ್ಳೆಯದು ಇರಬಹುದು. ಹೀಗಾಗಿ ಹೇಳಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸಬೇಕು. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ ಎಂದರು.
ಸಚಿವರ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ಒಬ್ಬೊಬ್ಬರು ಒಂದೊಂದು ಕಾರಣ ಇಟ್ಟುಕೊಂಡು ದೆಹಲಿಗೆ ಹೋಗುತ್ತಾರೆ. ಈ ವೇಳೆ ಪಕ್ಷದ ಮುಖ್ಯ ಕಚೇರಿಗೆ ಹೋಗಿ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡುವುದು, ಸಾಧ್ಯವಾದರೆ ಅಧ್ಯಕ್ಷರ ಜತೆ ಚರ್ಚಿಸುತ್ತಾರೆ. ಆಡಳಿತದಲ್ಲಿರುವಾಗ ಪಕ್ಷದ ಹೈಕಮಾಂಡ್ ಸಲಹೆಗಳನ್ನು ಸ್ವೀಕರಿಸಬೇಕು. ಇದೆಲ್ಲ ಸಾಮಾನ್ಯವಾಗಿ ನಡೆಯುವ ಬೆಳವಣಿಗೆ. ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಯಾರೂ ಯಾವ ಜಾತಿಗೂ ಅರ್ಜಿ ಹಾಕೊಂಡು ಹುಟ್ಟಲ್ಲ: ಗೃಹ ಸಚಿವ ಪರಮೇಶ್ವರ್
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಯಾರು ಹೇಳಿಲ್ಲ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದು ಮಾಧ್ಯಮದಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಸೂಚಿಸಿದರೆ ಮುಂದಿನ ತೀರ್ಮಾನದ ಬಗ್ಗೆ ತಿಳಿಸುತ್ತೇನೆ. ಇನ್ನು ಬಾಂಬ್ ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಕಸ್ತೂರು ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೂ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಐಪಿ ಅಡ್ರೆಸ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ: ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆಗಳ ಬೆನ್ನಲ್ಲೇ ಇದೀಗ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿದೆ. ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ತಡರಾತ್ರಿ ಊಟದ ನೆಪದಲ್ಲಿ ಸಭೆ ಸೇರಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದ್ದು, ಈ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂದು ಹೈಕಮಾಂಡ್ ಮೇಲೆ ಮತ್ತೆ ಒತ್ತಡ ಸೃಷ್ಟಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.
ನಾನು, ನನ್ನ ಕುಟುಂಬ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ: ಸಚಿವ ಸತೀಶ್ ಜಾರಕಿಹೊಳಿ
ಮೂಲಗಳ ಪ್ರಕಾರ ಈಗ ಮತ್ತೆ ಡಿಸಿಎಂ ಪದವಿ ಸೃಷ್ಟಿ ಚರ್ಚೆ ಹುಟ್ಟುಹಾಕುವುದರ ಹಿಂದೆ ಎರಡು ಉದ್ದೇಶಗಳಿವೆ. 1- ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂದು ರಾಜ್ಯ ನಾಯಕತ್ವ ಹೈಕಮಾಂಡ್ ಮೂಲಕ ಹೇಳಿಸುವ ಗುಮಾನಿ ಇರುವ ಕಾರಣ ನಾಯಕತ್ವಕ್ಕೆ ಈ ಮೂಲಕ ತಿರುಗೇಟು ನೀಡುವುದು. ಹಾಲಿ ಇರುವ ಏಕೈಕ ಉಪ ಮುಖ್ಯಮಂತ್ರಿ ಹುದ್ದೆಯ ಮಹತ್ವವನ್ನು ಕಡಿಮೆ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆಸುವುದು.