ಸ್ಪೇಸ್‌ ಟೆಕ್ನಾಲಜಿ, ಐಟಿ ನೀತಿಗೆ ಸಂಪುಟ ಅಸ್ತು: ಬಾಹ್ಯಾಕಾಶ ತಂತ್ರಜ್ಞಾನಕ್ಕೆ 225 ಕೋಟಿ ನೆರವು

Published : Nov 14, 2025, 08:23 AM IST
cabinet approval Karnataka

ಸಾರಾಂಶ

ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸುವ ಮಹತ್ವಾಕಾಂಕ್ಷೆಯೊಂದಿಗೆ ರಚಿಸಿರುವ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030’ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬೆಂಗಳೂರು (ನ.14): ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ 225 ಕೋಟಿ ರು.ಗೂ ಹೆಚ್ಚು ಪ್ರೋತ್ಸಾಹ ಧನ ನೀಡಿ ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸುವ ಮಹತ್ವಾಕಾಂಕ್ಷೆಯೊಂದಿಗೆ ರಚಿಸಿರುವ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030’ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ಇಸ್ರೋ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಎಂಎಸ್‌ಎಸ್‌ಎಂಇ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಹೂಡಿಕೆ, ಸಂಶೋಧನೆ, ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಅಂಶಗಳನ್ನು ಒಳಗೊಂಡ ನೀತಿಗೆ ಒಪ್ಪಿಗೆ ನೀಡಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.50 ಪಾಲು ಹೊಂದುವ ಮೂಲಕ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದನ್ನು ಉಳಿಸಿಕೊಂಡು ಜಾಗತಿಕ ಮಟ್ಟದಲ್ಲಿ ಶೇ.5 ರಷ್ಟು ಪಾಲುದಾರಿಕೆ ಸಾಧಿಸಲು ಹಾಗೂ ಜಾಗತಿಕ, ದೇಶೀಯ ಕಂಪನಿಗಳಿಂದ 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸುವ ಉದ್ದೇಶವನ್ನು ನೀತಿ ಹೊಂದಿದೆ ಎಂದರು.

50 ಸಾವಿರ ಯುವ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಕೌಶಲ್ಯಯುತ ಕಾರ್ಯಪಡೆ ಸೃಷ್ಟಿಸುವುದು, 500 ಕರ್ನಾಟಕ ಮೂಲದ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಎಸ್‌ಎಂಇಗಳಿಗೆ ಅನುದಾನ ಮತ್ತು ಆರ್ಥಿಕ ಬೆಂಬಲ ನೀಡುವುದು. ಆಡಳಿತ ಮತ್ತು ಇತರ ವಲಯಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಳವಡಿಕೆ ಸುಧಾರಿಸುವುದು ನೀತಿಯ ಉದ್ದೇಶ ಎಂದು ಮಾಹಿತಿ ನೀಡಿದರು.

ಹೂಡಿಕೆದಾರರಿಗೆ ಆಕರ್ಷಕ ಪ್ರೋತ್ಸಾಹ ಧನ ನೀಡಿ ಬಾಹ್ಯಾಕಾಶ ಉತ್ಪಾದನಾ ಪಾರ್ಕ್ ಮತ್ತು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿ, ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವುದು, ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ಅರಿವು ಮೂಡಿಸಿ, ಅದರ ಅಳವಡಿಕೆಯನ್ನು ಉತ್ತೇಜಿಸುವುದು ನೀತಿಯ ಉದ್ದೇಶ ಎಂದರು.

11.5 ಲಕ್ಷ ಕೋಟಿ ರು. ಸಾಫ್ಟ್‌ವೇರ್ ರಫ್ತು ಗುರಿಯ ಐಟಿ ನೀತಿಗೆ ಅನುಮತಿ

ರಾಜ್ಯದಲ್ಲಿ ಮುಂದಿನ ಐದು ವರ್ಷದಲ್ಲಿ ಸಾಫ್ಟ್‌ವೇರ್ ರಫ್ತನ್ನು 11.5 ಲಕ್ಷ ಕೋಟಿ ರು.ಗೆ ಹೆಚ್ಚಿಸುವ ಗುರಿಯ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ -2025-2030’ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಆಚೆಗೆ ಐಟಿ ಉದ್ಯಮ ಬೆಳೆಸುವ ಜತೆಗೆ ಎಐ, ಕ್ವಾಂಟಮ್, ಗ್ರೀನ್‌ ಟೆಕ್ನಾಲಜಿಯಂತಹ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಿದೆ. ಪ್ರಸ್ತುತ 4.09 ಲಕ್ಷ ಕೋಟಿ ರು. ಇರುವ ಸಾಫ್ಟ್‌ವೇರ್‌ ರಫ್ತನ್ನು11.5 ಲಕ್ಷ ಕೋಟಿ ರು.ಗೆ ಹೆಚ್ಚಿಸಲು ನೀತಿಯಲ್ಲಿ ಉದ್ದೇಶಿಸಲಾಗಿದೆ.

ದೇಶದಲ್ಲಿ ರಾಜ್ಯದ ಐಟಿ ವಲಯದ ಕೊಡುಗೆಯನ್ನು ಶೇ.26 ರಿಂದ ಶೇ.36ಕ್ಕೆ ಏರಿಸಲು ಪ್ರೋತ್ಸಾಹ ನೀಡಲಿದೆ. ಇನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ತುಮಕೂರು, ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಇತರ ನೂತನ ತಂತ್ರಜ್ಞಾನಗಳ ಮೇಲೆ ಗಮನಹರಿಸಿ ಐಟಿ ಹೂಡಿಕೆ ಆಕರ್ಷಿಸುವುದು. ಬೆಂಗಳೂರಿನಿಂದ ಆಚೆಗೆ ಸ್ಥಾಪನೆಯಾಗುವ ಐಟಿ ಕಂಪನಿಗಳಿಗೆ ನೇಮಕಾತಿ ನೆರವು, ಇಂಟರ್ನ್‌ಶಿಪ್ ವೆಚ್ಚ ಮರುಪಾವತಿ, ಭವಿಷ್ಯ ನಿಧಿ ಮರುಪಾವತಿ, ಕೌಶಲ್ಯ ತರಬೇತಿ ವೆಚ್ಚ ಮರುಪಾವತಿ ಸೇರಿ 16 ವಿವಿಧ ಪ್ರೋತ್ಸಾಹ ನೀಡಲು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ