
ಬೆಂಗಳೂರು (ಜ.22): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವು ಇಂದು ಸಾಂವಿಧಾನಿಕ ಬಿಕ್ಕಟ್ಟು ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಭಾಷಣ ಮೊಟಕುಗೊಳಿಸಿ ನಿರ್ಗಮಿಸುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಗೆ ಮುತ್ತಿಗೆ ಹಾಕಿ, ಅಗೌರವ ತೋರಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸುದೀರ್ಘ ದೂರು ಸಲ್ಲಿಸಿದ್ದಾರೆ.
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರ್. ಅಶೋಕ್, ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ-27 ಅನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
'ಸಂವಿಧಾನದ 175 ಅಥವಾ 176ನೇ ಅನುಚ್ಛೇದದಡಿ ರಾಜ್ಯಪಾಲರು ಭಾಷಣ ಮಾಡುವಾಗ ಅಥವಾ ನಿರ್ಗಮಿಸುವಾಗ ಯಾವುದೇ ಸದಸ್ಯರು ಅಡ್ಡಿ ಅಥವಾ ವಿಘ್ನ ಉಂಟುಮಾಡುವುದು ಸದನದ ಆದೇಶದ ತೀವ್ರ ಉಲ್ಲಂಘನೆಯಾಗುತ್ತದೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಅಡ್ಡಗಟ್ಟಿ, ತಳ್ಳಾಡಿ ಅಗೌರವ ತೋರಿದ ಸದಸ್ಯರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು' ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಸ್ಪೀಕರ್‌ಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. 'ಇಂದು ಕರಾಳ ದಿನ. ಕಾಂಗ್ರೆಸ್‌ನವರು ಅತ್ಯಂತ ಕೀಳು ಮಟ್ಟದಲ್ಲಿ ಅಧಿವೇಶನ ನಡೆಸಿದ್ದಾರೆ. ರಾಜ್ಯಪಾಲರು ಸಂವಿಧಾನಬದ್ಧವಾಗಿಯೇ ಕೆಲಸ ಮಾಡಿದ್ದಾರೆ. ಈ ಹಿಂದೆ ರಾಜ್ಯಪಾಲ ಭರತ್ ದ್ವಾಜ್ ಅವರ ಕಾಲದಲ್ಲೂ ಇಂತಹ ಘಟನೆಗಳು ನಡೆದಿದ್ದವು. ರಾಜ್ಯಪಾಲರಿಗೆ ಭಾಷಣ ಪ್ಲೇ ಮಾಡಿ ಹೋಗುವ ಅಧಿಕಾರವಿದೆ, ಇದರಲ್ಲಿ ತಪ್ಪೇನಿದೆ?' ಎಂದು ಪ್ರಶ್ನಿಸಿದರು.
ಸಚಿವ ಎಚ್.ಕೆ. ಪಾಟೀಲ್ ವಿರುದ್ಧ ಕಿಡಿ: 'ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಎಚ್.ಕೆ. ಪಾಟೀಲರೇ ಸ್ವತಃ ರಾಜ್ಯಪಾಲರ ಹಾದಿಗೆ ಅಡ್ಡಿಪಡಿಸಿದ್ದಾರೆ. ಅಡ್ಡಿಪಡಿಸಿದ ಶಾಸಕರನ್ನು ಕೂಡಲೇ ಸದನದಿಂದ ಹೊರಹಾಕಬೇಕು. ರಾಜ್ಯಪಾಲರು ಇವರ ಬಿಲ್‌ಗಳಿಗೆ ಸಹಿ ಹಾಕುವಾಗ ಸರಿಯಿರುತ್ತದೆ, ಈಗ ಮಾತ್ರ ವಿರೋಧವೇ? ಕಾಂಗ್ರೆಸ್‌ನವರು ಲೋಕಭವನವನ್ನು (ರಾಜಭವನ) 'ಕಾಂಗ್ರೆಸ್ ಭವನ' ಮಾಡಲು ಹೊರಟಿದ್ದಾರೆ' ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ್, 'ಅಂಬೇಡ್ಕರ್ ಅವರನ್ನು ಈ ಹಿಂದೆ ಸೋಲಿಸಿದ್ದೇ ಕಾಂಗ್ರೆಸ್ಸಿಗರು. ಇಂದು ಅಧಿವೇಶನದಲ್ಲಿ ರಾಜ್ಯಪಾಲರಿಗೆ ಮುತ್ತಿಗೆ ಹಾಕುವ ಮೂಲಕ ಸಂವಿಧಾನ ವಿರೋಧಿ ನಡವಳಿಕೆ ತೋರಿದ್ದಾರೆ. ಇದಕ್ಕೆ ಸ್ಪೀಕರ್ ಕಠಿಣ ಕ್ರಮ ಜರುಗಿಸದಿದ್ದರೆ ನಾವು ಹೋರಾಟ ಮುಂದುವರಿಸುತ್ತೇವೆ' ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.