ರಾರಾ, ಶಿರಾದಲ್ಲಿ ಹೈವೋಲ್ಟೇಜ್ ಉಪಕದನ ಇಂದು| ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆಯ ಕಣ| 31 ಮಂದಿ ಅಭ್ಯರ್ಥಿಗಳ ಭವಿಷ್ಯ ತೀರ್ಮಾನ| ನ.10ರಂದು ಮತ ಎಣಿಕೆ| ಅಂದೇ ಫಲಿತಾಂಶ
ಬೆಂಗಳೂರು(ನ.02): ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಂಗಳವಾರ ನಡೆಯಲಿರುವ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 31 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುವುದು. ಎರಡೂ ಕ್ಷೇತ್ರಗಳಲ್ಲಿ ಒಟ್ಟು 1008 ಮತಗಟ್ಟೆಸ್ಥಾಪನೆ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ 6 ಅತಿಸೂಕ್ಷ್ಮ, 64 ಸೂಕ್ಷ್ಮ ಮತಗಟ್ಟೆಸೇರಿ ಒಟ್ಟು 330 ಮತಗಟ್ಟೆಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ 11 ಅತಿಸೂಕ್ಷ್ಮ ಮತ್ತು 82 ಸೂಕ್ಷ್ಮ ಮತಗಟ್ಟೆಸೇರಿದಂತೆ ಒಟ್ಟು 678 ಮತಗಟ್ಟೆಸ್ಥಾಪಿಸಲಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 801 ಬ್ಯಾಲೆಟ್ ಯೂನಿಟ್, 801 ಕಂಟ್ರೋಲ್ ಯೂನಿಟ್ ಮತ್ತು 801 ವಿವಿಪ್ಯಾಟ್ ಬಳಸಲಾಗುವುದು, ಹೆಚ್ಚುವರಿಯಾಗಿ 798 ಬ್ಯಾಲೆಟ್ ಯೂನಿಟ್, 770 ಕಂಟ್ರೋಲ್ ಯೂನಿಟ್, 762 ವಿವಿಪ್ಯಾಟ್ ಹೊಂದಲಾಗಿದೆ. ಅದೇ ರೀತಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ 3020 ಬ್ಯಾಲೆಟ್ ಯೂನಿಟ್, 1458 ಕಂಟ್ರೋಲ್ ಯೂನಿಟ್ ಮತ್ತು 1450 ವಿವಿಪ್ಯಾಟ್‌ಗಳಿವೆ. ಹೆಚ್ಚುವರಿಯಾಗಿ 1888 ಬ್ಯಾಲೆಟ್ ಯೂನಿಟ್, 1424 ಕಂಟ್ರೋಲ್ ಯೂನಿಟ್ ಮತ್ತು 1431 ವಿವಿಪ್ಯಾಟ್‌ಗಳನ್ನು ಇಟ್ಟುಕೊಳ್ಳಲಾಗಿದೆ.
ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಥರ್ಮಲ್ ಪರೀಕ್ಷೆ, ಸ್ಯಾನಿಟೈಸರ್ ಸೇರಿದಂತೆ ಇತರೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಕೈಗೊಂಡಿರುವ ಮುನ್ನಚ್ಚರಿಕೆ ಕ್ರಮಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಯೊಬ್ಬರಿಗೆ ಜವಾಬ್ದಾರಿ ನೀಡಬೇಕು ಆಯೋಗವು ಸೂಚನೆ ನೀಡಿದೆ.
ಸಿಬ್ಬಂದಿ ನಿಯೋಜನೆ:
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಸಾಕಷ್ಟುಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದೆ. ಶಿರಾ ಕ್ಷೇತ್ರದಲ್ಲಿ ಒಟ್ಟು 3857 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1588 ಮತದಾನ ಸಿಬ್ಬಂದಿ, 128 ಎಸ್ಫೋರ್ಸ್‌ಮೆಂಟ್ ಸಿಬ್ಬಂದಿ, 33 ಸೂಕ್ಷ್ಮ ವೀಕ್ಷಕರು, 866 ರಾಜ್ಯ ಪೊಲೀಸರು, 270 ಸಶಸ್ತ್ರ ಮೀಸಲು ಪಡೆ, 267 ಬೂತ್‌ಮಟ್ಟದ ಅಧಿಕಾರಿಗಳು, 139 ಚಾಲಕರು, ನೆರವಿಗಾಗಿ 9 ಸಿಬ್ಬಂದಿ, ಇತರರು 557 ಮಂದಿಯನ್ನು ನಿಯೋಜಿಸಲಾಗಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ 4203 ಮತದಾನ ಸಿಬ್ಬಂದಿ, 156 ಎಸ್ಫೋರ್ಸ್‌ಮೆಂಟ್ ಸಿಬ್ಬಂದಿ, 115 ಸೂಕ್ಷ್ಮ ವೀಕ್ಷಕರು, 2623 ರಾಜ್ಯ ಪೊಲೀಸರು, 300 ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, 381 ಬೂತ್ ಮಟ್ಟದ ಅಧಿಕಾರಿಗಳು, 146 ಚಾಲಕರು, ನೆರವಿಗಾಗಿ 5 ಸಿಬ್ಬಂದಿ, 1586 ಇತರೆ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಮತದಾನಕ್ಕೆ ಪರ್ಯಾಯ ದಾಖಲೆಗಳು:
ಮತಪಟ್ಟಿಯಲ್ಲಿ ಹೆಸರು ಹೊಂದಿರುವವರು ಮತ ಚಲಾಯಿಸಲು ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ದಾಖಲೆ ಸಲ್ಲಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್, ನರೇಗಾ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಸಂಸದರು, ಶಾಸಕರು ನೀಡಿದ ಅಧಿಕೃತ ಗುರುತಿನ ಚೀಟಿ, ಪದವಿ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರವನ್ನು ಸಹ ಹಾಜರುಪಡಿಸಿ ಮತಲಾಯಿಸಬಹುದಾಗಿದೆ.
ಇಂದು ಎರಡೂ ಕ್ಷೇತ್ರದಲ್ಲಿ ರಜೆ:
ಎರಡೂ ಕ್ಷೇತ್ರದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳು ಸೇರಿದಂತೆ ಕಾರ್ಖಾನೆ, ಖಾಸಗಿ ಕಂಪನಿಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ನೋಂದಾಯಿತ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗಲು ವೇತನ ಸಹಿತ ರಜೆ ಘೋಷಿಸಿ ಆದೇಶಿಸಲಾಗಿದೆ. ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನ.10ಕ್ಕೆ ಫಲಿತಾಂಶ:
ನ.10ರಂದು ಮತ ಎಣಿಕೆ ನಡೆಯಲಿದ್ದು, ಶಿರಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು ಶ್ರೀಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ನಡೆಯಲಿದೆ.
ರಾ.ರಾ.ನಗರ: ಮುನಿರತ್ನ - ಬಿಜೆಪಿ, ಕುಸುಮಾ- ಕಾಂಗ್ರೆಸ್, ಕೃಷ್ಣಮೂರ್ತಿ- ಜೆಡಿಎಸ್
16 ಜನ: ಅಭ್ಯರ್ಥಿಗಳು ಸ್ಪರ್ಧೆಯಲ್ಲಿ
4.62 ಲಕ್ಷ: ಒಟ್ಟಾರೆ ಮತದಾರರು
678 ಕಡೆ: ಮತಕೇಂದ್ರಗಳು ರೆಡಿ
ಶಿರಾ: ಡಾ.ರಾಜೇಶ್ ಗೌಡ - ಬಿಜೆಪಿ, ಟಿ.ಬಿ.ಜಯಚಂದ್ರ - ಕಾಂಗ್ರೆಸ್, ಅಮ್ಮಾಜಮ್ಮ- ಜೆಡಿಎಸ್
15 ಮಂದಿ: ಅಭ್ಯರ್ಥಿಗಳು ಕಣದಲ್ಲಿ
2.15 ಲಕ್ಷ: ಒಟ್ಟಾರೆ ಮತದಾರರು
330 ಕಡೆ: ಒಟ್ಟು ಮತಕೇಂದ್ರಗಳು