
ಬೆಂಗಳೂರು[ಫೆ.18]: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವರಾಗಿರುವವರ ಪೈಕಿ ಹಲವರು ಪ್ರತಿಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರೆ ಕಾಂಗ್ರೆಸ್-ಜೆಡಿಎಸ್ ಮುಖಂಡರ ಜತೆ ಸಂತಸದಿಂದ ಕುಶಲೋಪರಿ ಚರ್ಚೆ ನಡೆಸಿದ ಪ್ರಸಂಗ ನಡೆಯಿತು.
ವಿಧಾನಸೌಧದಲ್ಲಿ ವಿಧಾನಮಂಡಲದ ಜಂಟಿಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಿ.ಆರ್. ವಾಲಾ ಭಾಷಣ ಮಾಡಿದ ಬಳಿಕ ವಿರಾಮದ ವೇಳೆ ಕಾಂಗ್ರೆಸ್‌ನ ನಾಯಕರ ಬಳಿ ತೆರಳಿ ನೂತನ ಸಚಿವರು ಮಾತನಾಡಿಸಿದರು. ಈ ವೇಳೆ ಸಿದ್ದರಾಮಯ್ಯ ಅವರಿಂದ ಆಶೀರ್ವಾದ ಕೋರಿದರು. ನೂತನ ಸಚಿವರಾದ ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು ಸೇರಿದಂತೆ ಇನ್ನು ಕೆಲವರು ಕಾಂಗ್ರೆಸ್ ಮುಖಂಡರ ಜತೆ ಮಾತನಾಡಿದರು. ಆದರೆ, ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಡಾ. ಕೆ. ಸುಧಾಕರ್ ಮಾತ್ರ ಕಾಂಗ್ರೆಸ್ ನಾಯಕರ ಬಳಿ ಸುಳಿಯಲೇ ಇಲ್ಲ. ಅವರಿಬ್ಬರು ತಮ್ಮ ಆಸನದ ಬಳಿಯೇ ಇದ್ದರು.
ತಮ್ಮ ಭೇಟಿ ಮಾಡಿದ ನೂತನ ಸಚಿವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅಭಿನಂದನೆ ಸಲ್ಲಿಸಿದರು. ಸಿದ್ದರಾಮಯ್ಯ ಅವರು, ‘ಏನ್ರಯ್ಯ... ಈಗ ಮಂತ್ರಿಗಳಾದ್ರಲ್ಲ... ಖುಷಿ ನಾ.. ಈಗ ನಿಮಗೆ ನಾನು ಏನು ಬೈಯೋದಿಲ್ಲ, ನಿಮಗೆಲ್ಲಾ ಒಳ್ಳೆಯದಾಗಲಿ’ ಎಂದು ಆಶಿಸಿದರು.
‘ಕುಮಟಳ್ಳಿ ಮಾತ್ರ ಮಂತ್ರಿ ಆಗಿಲ್ಲಲ್ವಾ ಯಾಕೆ’ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಮಹೇಶ್ ಕುಮಟಳ್ಳಿ, ‘ಸರ್... ಎಷ್ಟುಬೈಯ್ಯಬೇಕು ಬಯ್ಯಿರಿ’ ಎಂದರು. ತರುವಾಯ ಬಿ.ಸಿ.ಪಾಟೀಲ್ ಮಾತನಾಡಿ, ‘ಜೂನ್‌ನಲ್ಲಿ ಕುಮಟಳ್ಳಿಗೆ ಚಾನ್ಸ್’ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಡಾ.ಜಿ.ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಇತರರು ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.