
ನವದೆಹಲಿ: ರಾಜ್ಯದ ರಾಜಕೀಯದಲ್ಲಿ ಹಲವು ಪ್ರಮುಖ ಬೆಳವಣಿಗೆಗಳು ದಾಖಲಾಗಿದ್ದು, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಒಂದು ರೌಂಡ್ ದೆಹಲಿಗೆ ಹೋಗಿ ಬಂದಿದ್ದಾರೆ. ಇದೀಗ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಬಗ್ಗೆ ಮುಖ್ಯಸಚೇತಕ ಸಲೀಂ ಅಹಮದ್ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ.
ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ಅವರು ನವದೆಹಲಿಯಲ್ಲಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಸಂಪುಟ ಪುನರ್ ರಚನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಒಟ್ಟು ಶೇ.50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ. ಸಚಿವ ಸ್ಥಾನದಿಂದ ಹೊರಬರುವವರಿಗೆ ಪಕ್ಷದ ಸಂಘಟನೆ ಕೆಲಸ ವಹಿಸಲಾಗುತ್ತದೆ ಎಂದು ಅವರು ಹೇಳಿದರು. ಮುಂದುವರೆದು ಮಾತನಾಡಿ ಎರಡು ದಶಕಗಳಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮತಾಂತರ ಕುರಿತಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಸಲೀಂ ಅಹಮದ್ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ, ಅದು ಪಕ್ಷ ಅಥವಾ ಸರ್ಕಾರದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು. ರಾಜಣ್ಣ ಅವರು “ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮದ ಹೆಸರು ಸೇರಿಸುವುದರಿಂದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ನಾನು ಅಮಿತ್ ಶಾ ಅವರನ್ನು ಭೇಟಿಯಾಗಿಲ್ಲ. ಕೆಲವರಿಗೆ ನನ್ನ ವಿಷಯ ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲವಂತೆ. ನಾನು ಅಮಿತ್ ಶಾ ಅವರನ್ನು ಭೇಟಿಯಾಗಲು ತಲೆ ಕೆಟ್ಟಿದ್ಯಾ? ಎಂದು ಹೇಳಿದರು. ಇದೇ ವೇಳೆ ಅವರು ಮಾಜಿ ಸಚಿವ ರಾಜಣ್ಣ ಅವರ ಮತಾಂತರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮೇಕೆದಾಟು ಪ್ರಕರಣದ ವಿಚಾರಣೆ ನಾಳೆಗೆ ನಿಗದಿಯಾಗಿದ್ದರೂ, ಸಂವಿಧಾನಿಕ ಪೀಠ ವಿಚಾರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದು ಮುಂದೂಡಿಕೆಯಾಗಿದೆ. ಡಿಕೆಶಿ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, ನಮ್ಮ ಕೇಸ್ ಬಂದಿತ್ತು, ಮುಂದೆ ಹೋಗಿದೆ ಎಂದರು. ಆಲಮಟ್ಟಿ ಜಲಾಶಯದ ಎತ್ತರ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಈ ವಿಷಯಕ್ಕೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಉತ್ತರ ಕೊಡಬೇಕು. ಬೊಮ್ಮಾಯಿ, ಶೆಟ್ಟರ್, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಇವರುಗಳೇ ಇದರ ಕುರಿತು ಮಾತನಾಡಬೇಕು, ಅವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ದೆಹಲಿಯ ಇಂದಿರಾ ಭವನದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಈ ಭೇಟಿ ಹಿನ್ನೆಲೆ, ಸಂಪುಟ ಬದಲಾವಣೆ ಹಾಗೂ ಮುಂದಿನ ರಾಜಕೀಯ ತಂತ್ರದ ಕುರಿತು ಚರ್ಚೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.