ನನ್ನ ನೆರವಿಲ್ಲದೇ ಗೆದ್ದ ಮಗನ ಬಗ್ಗೆ ಖುಷಿಯಿದೆ: ಬಚ್ಚೇಗೌಡ!

By Kannadaprabha NewsFirst Published Dec 10, 2019, 8:09 AM IST
Highlights

ನನ್ನ ನೆರವಿಲ್ಲದೇ ಗೆದ್ದ ಮಗನ ಬಗ್ಗೆ ಖುಷಿಯಿದೆ: ಬಚ್ಚೇಗೌಡ| ನಾನು ಶರತ್‌ ಪರ ಕೆಲಸ ಮಾಡಿಲ್ಲ, ಅವರು ಸ್ವಂತ ವರ್ಚಸ್ಸಿಂದ ಗೆದ್ದಿದ್ದಾನೆ| ಎಂಟಿಬಿ 1200 ಕೋಟಿ ರು. ಅಹಂ ತೋರಿದ್ದೇ ಸೋಲಿಗೆ ಕಾರಣವಾಯ್ತ| ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ, ನನ್ನ ವಿರುದ್ಧ ಕ್ರಮ ಸಾಧ್ಯವಿಲ್ಲ

ನವದೆಹಲಿ[ಡಿ.10]: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನ ನೆರವಿಲ್ಲದೇ ಗೆದ್ದ ಪುತ್ರ ಶರತ್‌ ಬಗ್ಗೆ ಖುಷಿ ಇದೆ ಎಂದು ಬಿಜೆಪಿ ನಾಯಕ, ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಚ್ಚೇಗೌಡ ಹೇಳಿದ್ದಾರೆ. ಅದರೆ ಇದೇ ವೇಳೆ, ಚುನಾವಣೆಯಲ್ಲಿ ನಾನೇನು ಪುತ್ರನ ಪರವಾಗಿ ಕೆಲಸ ಮಾಡಿರಲಿಲ್ಲ. ಅವನು ಅವನ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದಾನೆ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಚ್ಚೇಗೌಡ, ‘ಎಂಟಿಬಿ ನಾಗರಾಜ… ಅವರ ವರ್ತನೆ ಸರಿಯಿರಲಿಲ್ಲ. ಅವರು 1,200 ಕೋಟಿ ರೂ.ಗಳ ಆಹಂ ತೋರಿಸಿದ್ದೆ ಅವರಿಗೆ ಮುಳುವಾಯಿತು. ತನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಎಂಟಿಬಿ ಮೇಲೆ ಕೋಪವಿತ್ತು. ಕ್ಷೇತ್ರದಲ್ಲಿ ಕುರುಬರ ಮತ ಇಬ್ಬಾಗವಾದ ಕಾರಣಕ್ಕೆ ಎಂಟಿಬಿ ಸೋತಿದ್ದಾರೆ ಎಂದು ಬಚ್ಚೇಗೌಡ ಅಭಿಪ್ರಾಯ ಪಟ್ಟರು.

ಪಕ್ಷ ವಿರೋಧಿ ಅಲ್ಲ:

ತಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾಗಿ ಕೇಳಿಬಂದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಬಚ್ಚೇಗೌಡ, ‘ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನನ್ನ ಮಗನ ಜೊತೆಯಾಗಲೀ ಅಥವಾ ಅನ್ಯ ಪಕ್ಷಗಳ ಜೊತೆಯಾಗಲೀ ವೇದಿಕೆ ಹಂಚಿಕೊಂಡಿಲ್ಲ. 2 ಲಕ್ಷಕ್ಕೂ ಹೆಚ್ಚಿರುವ ಮತದಾರರಿಗೆ ನಾನು ದೂರವಾಣಿ ಮೂಲಕವೇ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಆರೋಗ್ಯ ಸಮಸ್ಯೆ:

ನನಗೆ ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಜವಾಬ್ದಾರಿಯಿದ್ದರೂ ಕೂಡ ನಾನೂ ಅಲ್ಲೂ ಕೆಲಸ ಮಾಡಲಿಲ್ಲ. ನನ್ನ ಆರೋಗ್ಯ ಸರಿಯಿಲ್ಲದಿದ್ದ ಕಾರಣಕ್ಕೆ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ಬಚ್ಚೇಗೌಡ ತಿಳಿಸಿದ್ದಾರೆ.

ಶಿಸ್ತು ಕ್ರಮ ಸಾಧ್ಯವಿಲ್ಲ:

ಇದೇ ವೇಳೆ ನನ್ನ ವೈದ್ಯಕೀಯ ದಾಖಲೆಗಳು ನನ್ನ ಬಳಿಯೇ ಇದ್ದು ಅದನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ತೋರಿಸುತ್ತೇನೆ. ನನ್ನ ಮಗನೇ ಆಗಿದ್ದರೂ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಆತನನ್ನು ಬೆಂಬಲಿಸಿ ಎಂದು ಯಾರಿಗೂ ಹೇಳಲಿಲ್ಲ. ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿ ಎಂದು ಹೈಕಮಾಂಡ್‌ ಹೇಳಿದ್ದು ಅದನ್ನು ಯಾರು ಪ್ರಶ್ನೆ ಮಾಡಲಾಗದು. ಈಗ ನನ್ನ ವಿರುದ್ಧ ಎಂಟಿಬಿ ನಾಗರಾಜ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ. ನಾನು ಶರತ್‌ಗೆ ಬೆಂಬಲ ನೀಡಿಲ್ಲದಿರುವ ಕಾರಣ ಬಿಜೆಪಿ ಹೈಕಮಾಂಡ್‌ ನನ್ನ ಮೇಲೆ ಕ್ರಮ ಕೈಗೊಳ್ಳಲಾರದು. ಆತನಿಗೆ ಅವನದ್ದೇ ಆದ ಬಳಗವೊಂದಿದ್ದು ಅವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದ. ಮತದಾರರು ಗೆಲ್ಲಿಸಿದ್ದಾರೆ ಎಂದು ಬಚ್ಚೇಗೌಡ ಹೇಳಿದ್ದಾರೆ.

ಪುತ್ರನ ಜೊತೆ ಸಮಾಲೋಚನೆ:

ನಾನು ಸಂಸದನಾಗಿದ್ದು ನನ್ನ ಕ್ಷೇತ್ರದಲ್ಲೇ ಹೊಸಕೋಟೆಯು ಬರುತ್ತದೆ. ಅಭಿವೃದ್ಧಿ ಕೆಲಸ, ಸಂಸದರ ನಿಧಿ ಬಳಕೆ ಮುಂತಾದ ವಿಷಯಗಳ ಬಗ್ಗೆ ನಾನು ಆತನೊಂದಿಗೆ ಮುಂದಿನ ದಿನಗಳಲ್ಲಿ ಸಮಾಲೋಚಿಸುತ್ತೇನೆ ಎಂದು ಬಚ್ಚೇಗೌಡರು ಹೇಳಿದ್ದಾರೆ.

click me!