ರಾಜ್ಯ ರಾಜಕೀಯಲ್ಲಿ ಬಿಗ್ ಟ್ವಿಸ್ಟ್: ಮೂರೂ ಡಿಸಿಎಂ ಹುದ್ದೆಗಳು ರದ್ದು?

By Kannadaprabha News  |  First Published Dec 11, 2019, 8:04 AM IST

ಮೂರೂ ಡಿಸಿಎಂ ಹುದ್ದೆಗಳು ರದ್ದು?| ವರಿಷ್ಠರ ಮುಂದೆ ಬೇಡಿಕೆ ಇಡಲಿರುವ ಬಿಎಸ್‌ವೈ| ಜಾರಕಿಹೊಳಿಯೂ ಡಿಸಿಎಂ ಆಕಾಂಕ್ಷಿ, ಅವರಿಗೆ ಹುದ್ದೆ ಕೊಟ್ಟರೆ ಇತರರ ಮುನಿಸು ಭೀತಿ


ಬೆಂಗಳೂರು[ಡಿ.11]: ಹಾಲಿ ಇರುವ ಉಪಮುಖ್ಯಮಂತ್ರಿ ಹುದ್ದೆಗಳನ್ನೂ ರದ್ದುಪಡಿಸುವ ಬಗ್ಗೆ ಪಕ್ಷದ ವರಿಷ್ಠರನ್ನು ಕೋರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪಾಳೆಯ ಚಿಂತನೆ ನಡೆಸಿದೆ.

ಸದ್ಯ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಈಗ ಗೆದ್ದಿರುವ ‘ಅನರ್ಹ’ ಶಾಸಕರ ಪೈಕಿ ಗೋಕಾಕ್‌ ಕ್ಷೇತ್ರದ ರಮೇಶ್‌ ಜಾರಕಿಹೊಳಿ ಅವರೂ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಆಕಾಂಕ್ಷೆ ಹೊಂದಿದ್ದಾರೆ. ಒಂದು ವೇಳೆ ವಾಲ್ಮೀಕಿ ಸಮುದಾಯದ ಜಾರಕಿಹೊಳಿ ಅವರಿಗೆ ನೀಡಿದರೆ ಅದೇ ಸಮುದಾಯದ ಹಾಲಿ ಸಚಿವ ಬಿ.ಶ್ರೀರಾಮುಲು ಮುನಿಸಿಕೊಳ್ಳುವ ಸಂಭವವಿದೆ. ಜತೆಗೆ ಉಪಮುಖ್ಯಮಂತ್ರಿ ಹುದ್ದೆಯಿಂದ ವಂಚಿತಗೊಂಡಿರುವ ಕೆ.ಎಸ್‌.ಈಶ್ವರಪ್ಪ ಹಾಗೂ ಆರ್‌.ಅಶೋಕ್‌ ಅವರೂ ಮತ್ತಷ್ಟುಬೇಸರಗೊಳ್ಳಬಹುದು. ಅದರ ಬದಲು ಉಪಮುಖ್ಯಮಂತ್ರಿ ಹುದ್ದೆಯನ್ನೇ ರದ್ದುಪಡಿಸಿ ಕೇವಲ ಸಚಿವರನ್ನಾಗಿ ಮುಂದುವರೆಸುವುದು ಸೂಕ್ತ ಎಂಬ ಚರ್ಚೆ ಆರಂಭವಾಗಿದೆ.

Latest Videos

undefined

ಆದರೆ, ಹಿಂದೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ನಿರ್ಧಾರ ಕೈಗೊಂಡಿದ್ದು ಬಿಜೆಪಿ ಹೈಕಮಾಂಡ್‌. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದು ಇಷ್ಟವಿಲ್ಲದಿದ್ದರೂ ಒಪ್ಪಿಕೊಳ್ಳದೆ ಅನ್ಯ ಮಾರ್ಗವಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ಅವರು ರಾಜಕೀಯವಾಗಿ ಗಟ್ಟಿಯಾಗಿದ್ದಾರೆ. ಹೀಗಾಗಿ, ವರಿಷ್ಠರ ಭೇಟಿ ವೇಳೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ಕೈಬಿಡುವ ಬಗ್ಗೆ ಪ್ರಸ್ತಾಪಿಸುವ ಸಂಭವವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!