ಫೋನ್ ಟ್ಯಾಪಿಂಗ್ ವಿವಾದ: ಅಂದಿನ ಸಿಎಂ ರಾಮಕೃಷ್ಣ ಹೆಗಡೆ ರಾಜೀನಾಮೆಯನ್ನು ಹೆಚ್‌ಡಿಕೆಗೆ ನೆನಪಿಸಿದ ಪೊನ್ನಣ್ಣ

Published : Mar 03, 2026, 04:19 PM IST
Karnataka Phone Tapping Controversy

ಸಾರಾಂಶ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದು,  ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾನೂನು ಸಲಹೆಗಾರ ಪೊನ್ನಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆಧಾರ ನೀಡಿದರೆ ತನಿಖೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.  

ರಾಜ್ಯ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ಆರೋಪ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಮಾತನಾಡುತ್ತಾ, ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿರುವುದು ಆಡಳಿತಾರೂಢ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರತಿಕ್ರಿಯೆ

ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಪೊನ್ನಣ್ಣ, “ಫೋನ್ ಟ್ಯಾಪಿಂಗ್ ಎಂಬುದು ಬಹಳ ಗಂಭೀರ ವಿಷಯ. ಸುಮ್ಮನೆ ರಾಜಕೀಯ ಹೇಳಿಕೆಗಾಗಿ ಈ ರೀತಿಯ ಆರೋಪ ಮಾಡಬಾರದು. ಜವಾಬ್ದಾರಿ ಇರುವ ವ್ಯಕ್ತಿಗಳು ಆಧಾರರಹಿತ ಹೇಳಿಕೆ ನೀಡುವುದು ಸರಿಯಲ್ಲ,” ಎಂದು ತಿರುಗೇಟು ನೀಡಿದ್ದಾರೆ.

ಈ ಹಿಂದೆ ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗಡೆ (ಜನತಾದಳ) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂತಹ ವಿಷಯಗಳಲ್ಲಿ ಸಾಕ್ಷಿ-ಆಧಾರಗಳಿದ್ದರೆ ತನಿಖಾ ಸಂಸ್ಥೆಗಳ ಮುಂದೆ ಇಡಲಿ. ಆಧಾರ ನೀಡಿದರೆ ಸರ್ಕಾರ ತನಿಖೆ ನಡೆಸಲು ಸಿದ್ಧವಾಗಿದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕಿಂತ ಮೊದಲು ಸಂಬಂಧಿತ ತನಿಖಾ ಸಂಸ್ಥೆಗಳ ಮುಂದೆ ದಾಖಲೆಗಳನ್ನು ಒದಗಿಸಬೇಕು,” ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಆಕ್ರೋಶ

ಕುಮಾರಸ್ವಾಮಿ ಅವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಉದ್ದೇಶದಿಂದ ವಿರೋಧ ಪಕ್ಷದ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನಗಳು ಫಲಿಸದು,” ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 2018ರ ಅವಧಿಯನ್ನು ಉಲ್ಲೇಖಿಸಿದ ಸಿಎಂ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಗಲೇ ಮಾಡಿದ್ದರು ಎಂದು ನೆನಪಿಸಿದರು. ಈ ವಿಷಯದಲ್ಲಿ ತನಿಖೆ ನಡೆದಿದ್ದುದನ್ನೂ ಸಿಎಂ ಪ್ರಸ್ತಾಪಿಸಿದರು.

ಡಿಕೆಶಿ ಪ್ರತಿಕ್ರಿಯೆ

ಕುಮಾರಸ್ವಾಮಿ ಹಾಗೂ ಆರ್. ಅಶೋಕ್ ಅವರ ಆರೋಪಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿರುವ ಅವರು, ಆರೋಪಗಳಿಗೆ ಸಮಗ್ರ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, “ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡೆದಿರುವುದು ಸತ್ಯ. ಈಗಲೂ ನಡೆಯುತ್ತಿದೆ. ಕೆಲವರು ಫೋನ್ ಟ್ಯಾಪಿಂಗ್ ಮಾಡುತ್ತಾ ಪವಿತ್ರರಂತೆ ವರ್ತಿಸುತ್ತಿದ್ದಾರೆ. ಇಂದಿನ ಸರ್ಕಾರದಲ್ಲಿ ಅದು ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು,” ಎಂದು ಹೇಳಿದರು.

ಅದೇ ವೇಳೆ, “ತಮ್ಮದೇ ಪಕ್ಷದ ಶಾಸಕರ ಮೇಲೆ ಅವರದ್ದೇ ಸಚಿವರು ಗುಪ್ತಚಾರಿಕೆ ನಡೆಸುತ್ತಿರುವುದು ಇದೇ ಮೊದಲ ಬಾರಿ. ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊಂದಿರುವವರು ತಮ್ಮದೇ ಸರ್ಕಾರದ ವಿರುದ್ಧ ಗುಪ್ತಚರಿಕೆ ಪ್ರಾರಂಭಿಸಿರುವುದು ದುರಂತ,” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದರು.

ರಾಜಕೀಯ ತೀವ್ರತೆ 

ಶಾಸಕರ ಫೋನ್ ಟ್ಯಾಪಿಂಗ್ ವಿಚಾರ ರಾಜ್ಯ ಸರ್ಕಾರದಲ್ಲಿ ಕಂಪನ ಉಂಟುಮಾಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಒಂದು ಕಡೆ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರ ಆಧಾರ ಒದಗಿಸಿದರೆ ತನಿಖೆಗೆ ಸಿದ್ಧವೆಂದು ಹೇಳುತ್ತಿದೆ. ಈ ನಡುವೆ, ರಾಜ್ಯ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ವಿಚಾರ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಕೆಂಡಾಮಂಡಲ, ಅಂಕಿಅಂಶ ಸಹಿತ ಸುದೀರ್ಫ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿದ್ದರಾಮಯ್ಯ!
ಅಲಿಪ್ತ ನೀತಿ ಶಾಶ್ವತವಲ್ಲ: ನಮಗೆ ದೇಶದ ಹಿತಾಸಕ್ತಿ ಮೊದಲು, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಮುಖ್ಯ - ಸಿಟಿ ರವಿ ತಿರುಗೇಟು