ಗ್ರಾಮ ಪಂಚಾಯತ್: ಸದಸ್ಯರ ನೇಮಕಾತಿ ಬದಲಾಗಿ ಬೇರೆ ಮಾರ್ಗ ಕಂಡುಕೊಂಡ ಸರ್ಕಾರ

By Suvarna NewsFirst Published Jun 11, 2020, 5:27 PM IST
Highlights

ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸದೆ ಸದಸ್ಯರ ನೇಮಕಾತಿ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಆದ್ರೆ ಬೇರೆ ತಿರ್ಮಾನ ಕೈಗೊಂಡಿದೆ.

ಬೆಂಗಳೂರು, (ಜೂ.11): ಕಾಂಗ್ರೆಸ್ ವತಿಯಿಂದ ಪ್ರಬಲವಾದ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಸದಸ್ಯರ ನೇಮಕಾತಿಯ ಬದಲಾಗಿ ಗ್ರಾಪಂಗಳಿಗೆ ಆಡಳಿತ ಅಧಿಕಾರಿಗಳನ್ನು ನಿಯೋಜಿಸಲು ಮುಂದಾಗಿದೆ.

ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲು ನಿರ್ಧಾರ ತೆಗೆದುಕೊಳ್ಳುವಂತೆ ಇಂದು (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಲಾಕ್‌ಡೌನ್: ಗ್ರಾಮ ಪಂಚಾಯತ್​ ಎಲೆಕ್ಷನ್ ಡೌಟ್, ಬೇರೆ ತೀರ್ಮಾನ ಕೈಗೊಂಡ ಸರ್ಕಾರ

ಎರಡ್ಮೂರು ತಿಂಗಳ ಅವಧಿಯಲ್ಲಿ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ ಮೂಲಕ ಗ್ರಾಪಂಗಳಿಗೆ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

ರಾಜ್ಯದ 6021 ಗ್ರಾಮ ಪಂಚಾಯತ್‌ಗಳ ಅವಧಿ ಜೂನ್‌ನಲ್ಲಿ ಅಂತ್ಯವಾಗಲಿದೆ. ಆದ್ರೆ, ಕೊರೋನಾ ಇರುವುದರಿಂದ ಚುನಾವಣೆ ಆಯೋಗ ಗ್ರಾಮ ಪಂಚಾಯಿತಿ ಎಲೆಕ್ಷನ್‌ ಮುಂದೂಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಾಮ ನಿರ್ದೇಶನ ಸದಸ್ಯರನ್ನ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಇದೀಗ ಸದಸ್ಯರ ನೇಮಕಾತಿ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದ್ದು, ಆಡಳಿತ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಿದೆ.

click me!