
ಕಲಬುರಗಿ (ಅ.01): ರಾಜ್ಯದಲ್ಲಿ ಮಳೆ, ನೆರೆಯಿಂದಾಗಿ ಸಂಭವಿಸಿದ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ (ಎನ್‌ಡಿಆರ್‌ಎಫ್) ನಿಯಮದಂತೆ ಕೇಂದ್ರದಿಂದ ನೀಡಲಾಗುವ ಪರಿಹಾರದ ಜೊತೆಗೆ, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8,500 ರು.ಸೇರಿಸಿ ನೊಂದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೆ, ಕೇಂದ್ರದ ನೆರವಿಗೆ ಕಾಯದೇ ಸಮೀಕ್ಷೆ ಮುಗಿದ ನಂತರ ರಾಜ್ಯ ಪಾಲಿನ ಪರಿಹಾರ ನೀಡಲಾಗುವುದು ಎಂದಿದ್ದಾರೆ. ಅವರು ಪ್ರವಾಹ ಪೀಡಿತ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ 2 ಸುತ್ತು ವೈಮಾನಿಕ ಸಮೀಕ್ಷೆ ನಡೆಸಿದರು. ಈ ನಡುವೆ, ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಸುದ್ದಿಗಾರರಿಗೆ ನೆರೆ ಪರಿಹಾರದ ವಿವರ ನೀಡಿದರು.
ಎನ್‌ಡಿಆರ್‌ಎಫ್ ನಿಯಮದಡಿ ಖುಷ್ಕಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ 8,500 ರು.ಪರಿಹಾರವಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯದಿಂದ 8,500 ರು. ಸೇರಿಸಿ ಒಟ್ಟು 17 ಸಾವಿರ ರು.ಗಳನ್ನು ರೈತರಿಗೆ ನೀಡುತ್ತೇವೆ. ಅದೇ ರೀತಿ, ನೀರಾವರಿ ಜಮೀನಿಗೆ ನಿಯಮದ ಪ್ರಕಾರ ಪ್ರತಿ ಹೆಕ್ಟೇರ್‌ಗೆ 17,500 ರು.ಕೊಡಬೇಕಿದೆ. ಅದಕ್ಕೆ ರಾಜ್ಯದಿಂದ ಹೆಚ್ಚುವರಿಯಾಗಿ 8,500 ರು. ಸೇರಿಸಿ 25,500 ರು.ನೀಡಲಾಗುವುದು. ಬಹುವಾರ್ಷಿಕ ಬೆಳೆಗಳಿಗೆ ನೀಡುವ 22,500 ರು. ಜೊತೆಗೆ ಹೆಚ್ಚುವರಿಯಾಗಿ 8,500 ರು. ಸೇರಿಸಿ, ಒಟ್ಟು 31 ಸಾವಿರ ರು.ನೀಡಲಾಗುವುದು. ಇದರಿಂದಾಗಿ ಅತಿವೃಷ್ಟಿ ಪೀಡಿತ ರೈತರಿಗೆ 2 ಸಾವಿರ ಕೋಟಿ ರು. ಹೆಚ್ಚು ಪರಿಹಾರ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಸಮೀಕ್ಷೆಗೂ ಇದಕ್ಕೂ ಮೊದಲು, ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳಿಗೆ ಸೇರಿದ ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಿ, ಭೀಮಾ ನದಿಯ ಪ್ರವಾಹದಿಂದ ಉಂಟಾಗಿರುವ ಹಾನಿ ಕುರಿತು ವಿವರವಾದ ಮಾಹಿತಿ ಪಡೆದರು. ಆಯಾ ಜಿಲ್ಲೆಗಳ ಸಚಿವರು, ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದು, ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉಂಟಾದ ಹಾನಿಯ ಸಮಗ್ರ ಚಿತ್ರಣವನ್ನು ಮುಖ್ಯಮಂತ್ರಿಗೆ ನೀಡಿದರು. ಸಮೀಕ್ಷೆ ಬಳಿಕ, ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಲ್ಕೂ ಜಿಲ್ಲೆಗಳ ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು.
ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ಹರಿದು ಬಂದ ಅಪಾರ ಪ್ರಮಾಣದ ನೀರು, ಜೊತೆಗೇ ಸ್ಥಳೀಯವಾಗಿ ಆಗಿರುವ ಅಧಿಕ ಮಳೆಯಿಂದಾಗಿ ಅನಾಹುತದ ಪ್ರಮಾಣ ಹೆಚ್ಚಾಗುತ್ತಿದೆ. ಬೆಳೆಹಾನಿಗೊಳಗಾದವರು, ಮನೆ ಕಳೆದುಕೊಂಡವರು, ದಿನಸಿ, ಬಟ್ಟೆಬರೆ ಕಳೆದುಕೊಂಡವರೆಲ್ಲರಿಗೂ ನಿಯಮದಂತೆ ಪರಿಹಾರ ನೀಡಲಾಗುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಪರಿಹಾರವನ್ನು ಶೀಘ್ರದಲ್ಲೇ ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಗದಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಅತ್ಯಧಿಕ ಹಾನಿ ಸಂಭವಿಸಿದೆ. ಪ್ರಾಥಮಿಕ ವರದಿಗಳಂತೆ ಇಡೀ ರಾಜ್ಯದಲ್ಲಿ ಅತಿವೃಷ್ಟಿಯಿಂದ 10 ಲಕ್ಷ ಹೆಕ್ಟೇರ್ ಪ್ರದೇಶವ್ಯಾಪ್ತಿಯಲ್ಲಿ ಬೆಳೆಹಾನಿ ಸಂಭವಿಸಿದೆ. ಆ ಪೈಕಿ, ಉ.ಕ.ದ 8 ಜಿಲ್ಲೆಗಳಲ್ಲೇ 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದು ರಾಜ್ಯದ ಒಟ್ಟು ಹಾನಿಯ ಶೇ.95 ರಷ್ಟಿದೆ. 10 ಲಕ್ಷ ಹೆಕ್ಟೇರ್ ಬೆಳೆಹಾನಿಯಲ್ಲಿ 8.88 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು, 71,626 ಹೆಕ್ಟೇರ್ ತೋಟಗಾರಿಕೆ ಬೆಳೆಗಳು. ಮಳೆ ತಗ್ಗಿದ ನಂತರ ಸಮೀಕ್ಷೆ ಮುಂದುವರಿಯಲಿದ್ದು, ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ನಷ್ಟ ಅನುಭವಿಸಿದ ಎಲ್ಲರಿಗೂ ಪರಿಹಾರ ಪಾವತಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯಕ್ಕೆ ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ನಂತರ, ಹಾನಿಯ ಅಂದಾಜು ಲೆಕ್ಕಹಾಕಿ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ, ಗೃಹ ಸಚಿವರು ಹಾಗೂ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಮನವಿ ನೀಡುತ್ತೇವೆ. ಆದರೆ ಕೇಂದ್ರದ ನೆರವಿಗೆ ಕಾಯದೇ ರಾಜ್ಯದ ಪಾಲಿನ ಹೆಚ್ಚುವರಿ ಪರಿಹಾರ ನೀಡುತ್ತೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.