ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಕೋಳಿವಾಡ ಪುತ್ರ?: ಹಾಲಿ ಶಾಸಕ ಅರುಣಕುಮಾರ್‌ಗೆ ಟಿಕೆಟ್‌ ಬಹುತೇಕ ನಿಶ್ಚಿತ

By Kannadaprabha News  |  First Published Apr 7, 2023, 1:39 PM IST

ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್‌ ಮಣೆ ಹಾಕಿದ್ದು, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಪುತ್ರನಿಗೆ ಟಿಕೆಟ್‌ ನೀಡಿದೆ. ಬಿಜೆಪಿಯಿಂದ ಹಾಲಿ ಶಾಸಕ ಅರುಣಕುಮಾರಗೆ ಬಿಜೆಪಿ ಟಿಕೆಟ್‌ ಬಹುತೇಕ ನಿಶ್ಚಿತವಾಗಿದೆ.


ನಾರಾಯಣ ಹೆಗಡೆ

ಹಾವೇರಿ (ಏ.07): ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್‌ ಮಣೆ ಹಾಕಿದ್ದು, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಪುತ್ರನಿಗೆ ಟಿಕೆಟ್‌ ನೀಡಿದೆ. ಬಿಜೆಪಿಯಿಂದ ಹಾಲಿ ಶಾಸಕ ಅರುಣಕುಮಾರಗೆ ಬಿಜೆಪಿ ಟಿಕೆಟ್‌ ಬಹುತೇಕ ನಿಶ್ಚಿತವಾಗಿದೆ. 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಆರ್‌. ಶಂಕರ್‌ ಅವರು ಈ ಸಲ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಬಿಜೆಪಿಯಿಂದಲೇ ಒಂದು ಚಾನ್ಸ್‌ ಕೇಳೋಣವೆಂದು ಆ ನಿಟ್ಟಿನಲ್ಲೂ ಕಸರತ್ತು ನಡೆಸಿದ್ದಾರೆ. 

Tap to resize

Latest Videos

undefined

ಅಲ್ಲಿಯೂ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವುದು ನಿಶ್ಚಿತ ಎನ್ನಲಾಗಿದ್ದು, ಮತ್ತೊಮ್ಮೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಮತ್ತೊಬ್ಬ ಬಿಜೆಪಿ ಯುವ ಮುಖಂಡ ಸಂತೋಷಕುಮಾರ ಪಾಟೀಲರ ನಡೆಯೇನು ಎಂಬುದನ್ನು ಕಾದು ನೋಡಬೇಕಿದೆ.  ನಾಲ್ಕು ದಶಕಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾಯಂ ಅಭ್ಯರ್ಥಿಯಾಗುತ್ತಿದ್ದ ಕೆ.ಬಿ.ಕೋಳಿವಾಡ, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿದಿದ್ದು, ತಮ್ಮ ಪುತ್ರ ಪ್ರಕಾಶಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅಖಾಡಕ್ಕೆ ಬಹುತೇಕ ಫೈನಲ್‌ ಟಚ್‌ ಸಿಕ್ಕಂತಾಗಿದೆ. ಆದರೆ, ಇದರಿಂದ ಇತರ ‘ಕೈ’ ಟಿಕೆಟ್‌ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿದೆ.

ದರ್ಶನ್ ಧ್ರುವ ನಾರಾಯಣ್ ಕುಟುಂಬಕ್ಕೆ ಮತ್ತೊಂದು ಶಾಕ್: ದಿವಂಗತ ಆರ್.ಧ್ರುವ ನಾರಾಯಣ್ ಧರ್ಮಪತ್ನಿ ವೀಣಾ ನಿಧನ

ಕಳೆದ ಐದು ಚುನಾವಣೆಗಳಲ್ಲಿ ಮೂರು ಬಾರಿ ಕಮಲ, ಒಮ್ಮೆ ಕಾಂಗ್ರೆಸ್‌, ಒಂದು ಸಲ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಬಿ. ಕೋಳಿವಾಡರನ್ನು ಪಕ್ಷೇತರ ಅಭ್ಯರ್ಥಿ ಆರ್‌. ಶಂಕರ್‌ ಸೋಲಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ, ಕ್ಷಿಪ್ರ ರಾಜಕೀಯ ಬೆಳವಣಿಗೆ ಬಯಸಿದ್ದ ಆರ್‌.ಶಂಕರ್‌, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ, ಬಳಿಕ, ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ, ಅಲ್ಲಿಯೂ ಸಚಿವರಾಗಲು ಹೋಗಿ ತಮ್ಮ ಶಾಸಕ ಸ್ಥಾನ ಕಳೆದುಕೊಂಡರು. 

2019ರ ಉಪಚುನಾವಣೆಯಲ್ಲಿ ಯುವ ನಾಯಕ ಅರುಣಕುಮಾರ ಪೂಜಾರ ಅವರನ್ನು ಕಣಕ್ಕಿಳಿಸಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈಗ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿರುವ ಆರ್‌.ಶಂಕರ್‌ ಮತ್ತೊಮ್ಮೆ ಕೆಳಮನೆ ಪ್ರವೇಶಿಸಲು ಸಜ್ಜಾಗಿ ನಿಂತಿದ್ದಾರೆ. ಯಾವ ಪಕ್ಷದೊಂದಿಗೂ ನಿಷ್ಠೆ ಇಲ್ಲದಿರುವುದೇ ಆರ್‌.ಶಂಕರ್‌ ಅವರನ್ನು ಒಬ್ಬಂಟಿಯಾಗಿಸಿದೆ. ಇದು ಹಾಲಿ ಶಾಸಕ, ಸಿಎಂ ಬೊಮ್ಮಾಯಿ ಅವರ ಮಾನಸಪುತ್ರ ಎನಿಸಿರುವ ಅರುಣಕುಮಾರ ಪೂಜಾರ ಪಾಲಿಗೆ ವರವಾಗಿದ್ದು, ಅವರಿಗೆ ಮತ್ತೊಮ್ಮೆ ಬಿಜೆಪಿ ಟಿಕೆಟ್‌ ಸಿಗುವುದು ಬಹುತೇಕ ನಿಶ್ಚಿತವಾಗಿದೆ.

ಕ್ಷೇತ್ರದ ಹಿನ್ನೆಲೆ: 2004ರಿಂದ ಈಚೆಗೆ ನಡೆದ ಐದು ಚುನಾವಣೆಗಳಲ್ಲಿ ಕೆ.ಬಿ.ಕೋಳಿವಾಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯ ಜಿ.ಶಿವಣ್ಣ ಭರ್ಜರಿ ಗೆಲುವು ದಾಖಲಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪರ ಅಲೆ, ಬಿಜೆಪಿ ಹೋಳಾಗಿ ಕೆಜೆಪಿ ಜನ್ಮತಾಳಿದ್ದರ ಲಾಭ ಗಳಿಸಿದ ಕೋಳಿವಾಡ ಗೆಲುವು ಸಾಧಿಸಿದ್ದರು. 2018ರಲ್ಲಿ ಆರ್‌.ಶಂಕರ್‌ ಗೆದ್ದಿದ್ದರೆ. 2019ರ ಉಪಚುನಾವಣೆ ಹಾಲಿ ಶಾಸಕ ಅರುಣ ಕುಮಾರ ಪೂಜಾರ ಪಾಲಿಗೆ ಅದೃಷ್ಟತಂದಿತ್ತಿತು. ಸದ್ಯ ಅರುಣಕುಮಾರ ಮತ್ತು ಆರ್‌.ಶಂಕರ್‌ ನಡುವೆ ಹೊಂದಾಣಿಕೆ ಇಲ್ಲದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿಯುತ್ತಿದ್ದಾರೆ.

ಬಿಜೆಪಿಗೆ ಸುದೀಪ್‌ ಬೆಂಬಲ ಸ್ವಾಗತಾರ್ಹ: ಬಿ.ಎಸ್‌.ಯಡಿಯೂರಪ್ಪ

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ 2.32 ಲಕ್ಷ ಮತದಾರರ ಪೈಕಿ 65 ಸಾವಿರ ಲಿಂಗಾಯತ ಮತಗಳಿದ್ದು, 38 ಸಾವಿರ ಕುರುಬ ಸಮಾಜದ ಮತಗಳಿವೆ. 40 ಸಾವಿರ ಮುಸ್ಲಿಂ ಮತಗಳಿದ್ದು, ಎಸ್ಸಿ 34 ಸಾವಿರ, ಎಸ್ಟಿ23 ಸಾವಿರ ಹಾಗೂ ಇತರರು 35 ಸಾವಿರ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ ಹಾಗೂ ಅಹಿಂದ ಮತಗಳೇ ನಿರ್ಣಾಯಕ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!