ನನಗೆ ಒಂದು ಅವಕಾಶ ಕೊಟ್ಟು ನೋಡಿ, ಕೇಂದ್ರದಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಈ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ
ನರಗುಂದ(ಏ.11): ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ದೇಶದ ಜನರಿಗೆ ನೀಡಿದ ಯಾವುದೇ ವಚನ ಪಾಲನೆ ಮಾಡಿಲ್ಲ. ರೈತರ ಆದಾಯ ದ್ವಿಗುಣ ಸೇರಿದಂತೆ ಎಲ್ಲ ಆಶ್ವಾಸನೆಗಳು ಹುಸಿಯಾಗಿವೆ. ಆದರೆ ಶ್ರೀಮಂತರ ಆದಾಯ ಗಣನೀಯವಾಗಿ ಏರಿಕೆಯಾಗಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ನರಗುಂದ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಆರ್.ಯಾವಗಲ್ ಅವರು, ಪ್ರಧಾನಿಗಳು ರೈತರ ಆದಾಯ ದ್ವಿಗುಣದ ಮಾತು ಆಡಿದರು. ಆದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ರೈತರು ಹೋರಾಟ ಮಾಡಿದರೆ ಚಳವಳ ಹತ್ತಿಕ್ಕುವ ಕೆಲಸ ಮಾಡಿದರು. ಯುವಕರಿಗೆ ಉದ್ಯೋಗ ಸೃಷ್ಟಿ ಆಸೆ ತೋರಿಸಿ ಮೋಸ ಮಾಡಿದರು ಎಂದು ಟೀಕಿಸಿದರು.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ವಿಶ್ವ ಕಂಡ ದುರ್ಬಲ ಹಾಗೂ ಮಹಾನ್ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ ಎಂದು ಲೇವಡಿ ಮಾಡಿದರು.
undefined
'ರಾಜನೇ ಮತ್ತೆ ರಾಜನಾಗುವ ಯೋಗ..' ಗುಳೇದಗುಡ್ಡದ ಯುಗಾದಿ ಭವಿಷ್ಯವಾಣಿ! ಮತ್ತೊಮ್ಮೆ ಪ್ರಧಾನಿಯಾಗ್ತಾರಾ ಮೋದಿ?
ಕೊರೋನಾ ಕಾಲದಲ್ಲಿ ಮೋದಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಬದಲಿಗೆ ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು, ಮಾರುಕಟ್ಟೆ ದರದಲ್ಲಿ ತರಕಾರಿ ಖರೀದಿ ಮಾಡಿ, ಜನರಿಗೆ ಉಚಿತವಾಗಿ ವಿತರಣೆ ಮಾಡಿದೆವು. ಈ ಮೂಲಕ ರೈತರ ನೆರವಿಗೆ ಬಂದಿದ್ದೆವು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ನೆನಪಿಸಿದರು.
ಮಾಜಿ ಸಚಿವ ಆರ್.ಎಸ್.ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರತಿಪಕ್ಷಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ನಿರಂತರ ಪ್ರಯತ್ನ ಮಾಡಿದರು ಎಂದರು.
ಕೆಪಿಸಿಸಿ ಉಪಾಧ್ಯಕ್ಷರಾದ ಅಜಯಕುಮಾರ ಸರನಾಯಕ, ಡಿ.ಆರ್.ಪಾಟೀಲ, ಶಾಸಕರಾದ ಜೆ.ಟಿ.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಸೌದಾಗಾರ್ ಮಾತನಾಡಿದರು.
ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ:
ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದರೂ ಅವರಿಂದ ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ. ದಿ. ಅನಂತಕುಮಾರ್ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸಿದ ಕೇಂದ್ರದ ಎಲ್ಲ ಸಚಿವರು ರಾಜ್ಯಕ್ಕೆ ವಂಚನೆ ಮಾಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ವಾಗ್ದಾಳಿ ಮಾಡಿದರು.
ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇ ಸಾಧನೆ: ಸಂಯುಕ್ತ
ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇ ಸಾಧನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಗೇಲಿ ಮಾಡಿದರು. ರೈತರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಎಂದು ಆಗ್ರಹಪಡಿಸಿ ಹೋರಾಟ ಮಾಡಿದರೆ ಅವರ ಮೇಲೆ ಗೋಲಿಬಾರ್ ಮಾಡಿಸಿ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ಕೃಷಿ ಸಾಲ ಮನ್ನಾ ಮಾಡಲಿಲ್ಲ. ಆದರೆ ಶ್ರೀಮಂತ ಉದ್ಯಮಿಗಳ ₹14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು ಎಂದು ಟೀಕಿಸಿದರು.
ನನಗೆ ಒಂದು ಅವಕಾಶ ಕೊಡಿ. ಕಳಸಾ ಬಂಡೂರಿ, ಮಹಾದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ. ನೀವು ಕಾಂಗ್ರೆಸ್‌ಗೆ ನೀಡುವ ಪ್ರತಿ ಮತವೂ ಕೂಡ ಭಾರತದ ಭವಿಷ್ಯ ನಿರ್ಮಾಣ ಮಾಡಲು ಸಹಾಯವಾಗಲಿದೆ. ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದು ನಿಶ್ಚಿತ ಎಂದರು.
ಮೋದಿ ಸರ್ಕಾರ ಕಿತ್ತೊಗೆಯದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ; ಸಚಿವ ತಿಮ್ಮಾಪೂರ ವಾಗ್ದಾಳಿ!
ಕಾಂಗ್ರೆಸ್ ಸೇರಿದ ಆರೆಸ್ಸೆಸ್ ಕಾರ್ಯಕರ್ತ
ಆರ್‌ಎಸ್ಎಸ್ ಕಾರ್ಯಕರ್ತ ನಿಂಗಬಸಪ್ಪ ಬಾಣದ ಅವರು ಸಚಿವರು, ಶಾಸಕರು ಹಾಗೂ ಹಲವು ಮುಖಂಡರ ಸಮ್ಮುಖದಲ್ಲಿ ಗಣವೇಷಧಾರಿಯಾಗಿಯೇ ಆಗಮಿಸಿ ಕಾಂಗ್ರೆಸ್ ಸೇರ್ಪಡೆಯಾದರು. ನಾವು ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡಿಲ್ಲ. ಆದರೆ ಬಿಜೆಪಿ ಹಾದಿ ತಪ್ಪಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯದಲ್ಲೂ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಭ್ರಷ್ಟಾಚಾರ ಮಾಡಲಾಗಿದೆ. 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಕೇಳಿಬಂದಿತ್ತು. ಆದರೆ ಇದು 40 ಪರ್ಸೆಂಟ್ಗಿಂತಲೂ ಅಧಿಕ ಎಂದು ಹೇಳಿದರು. ಇಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಫೋನ್ ಕರೆ ಬಂದಿವೆ. ಆದರೆ ಯಾವುದೇ ಕಾರಣಕ್ಕೆ ವಾಪಸ್ ಹೋಗಲ್ಲ ಎಂದರು.
ನನಗೆ ಒಂದು ಅವಕಾಶ ಕೊಟ್ಟು ನೋಡಿ, ಕೇಂದ್ರದಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಈ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ತಿಳಿಸಿದ್ದಾರೆ.