
ಹಾಸನ(ಜ.13): ರಾಜ್ಯ ರಾಕರಣದಲ್ಲಿ ಸ್ಯಾಂಟ್ರೋ ರವಿ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿದೆ. ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಅನೈತಿಕ ದಂಧೆಗಳ ಆರೋಪಿ, ಅತ್ಯಾಚಾರ ಆರೋಪಿ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಪೊಲೀಸರ ನರೆವಿನೊಂದಿಗೆ ಅಹಮ್ಮದಾಬಾದ್‌ನಲ್ಲಿ ಸ್ಯಾಂಟ್ರೋ ರವಿ ಬಂಧನವಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಬೇಕು. ಸ್ಯಾಂಟ್ರೋ ರವಿ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದು ಹೇಳಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಇದೇ ಪ್ರಕರಣದಲ್ಲಿ ಗುಜರಾತ್ ಲಿಂಕ್ ಪ್ರಶ್ನಿಸಿಸಿದೆ. ಇತ್ತೀಚಿನ ಎಲ್ಲಾ ವಂಚಕರಿಗೆ ಗುಜರಾತ್ ನಂಟಿದೆ. ಇಷ್ಟೇ ಅಲ್ಲ ಅರಗ ಜ್ಞಾನೇಂದ್ರ ಗುಜರಾತ್ ತೆರಳಿದ್ದರು. ಇದೀಗ ಗುಜರಾತ್‌ನಲ್ಲೇ ಸ್ಯಾಂಟ್ರೋ ರವಿ ಬಂಧನವಾಗಿದೆ. ಇದು ಕಾಕತಾಳಿಯವಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಸ್ಯಾಂಟ್ರೋ ರವಿ ಬಂಧನ ವಿಚಾರ ಕುರಿತು ಸಿದ್ದರಾಮಯ್ಯ , ಕಾನೂನುಬದ್ಧ, ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದಾರೆ. ಯಾರೇ ತಪ್ಪು ಮಾಡಿದ್ರು ಕೂಡ ಕ್ರಮ ತೆಗೆದುಕೊಳ್ಳಬೇಕು. ಸ್ಯಾಂಟ್ರೋ ರವಿ ಜೊತೆ ಯಾರು ಹಿಂದೆ ಯಾರೂ ಇದ್ದಾರೆ, ಯಾವ ಪಕ್ಷ ಇದೆ, ಯಾವ ರಾಜಕಾರಣಿ ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ಸುಖಾಸುಮ್ಮನೆ ಅನುಮಾನಪಡುವುದು ಬೇಕಿಲ್ಲ, ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಿ. ಸರ್ಕಾರವೂ ಅವರದ್ದೇ ಇದೆ. ತನಿಖೆ ಮಾಡ್ಲಿ ಎಂದು ಸಿದ್ದರಾಮಯ್ಯ ಹೊಳೆನರಸಿಪುರದಲ್ಲಿ ಹೇಳಿದ್ದಾರೆ.
ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್, ಸ್ಯಾಂಟ್ರಿ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ!
ಇತ್ತ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಮೂಲಕ ಸರಣಿ ಟ್ವೀಟ್ ಮಾಡಿ ಸ್ಯಾಂಟ್ರೋ ರವಿ ಬಂಧನ ಹಾಗೂ ಬಿಜೆಪಿ ಸರ್ಕಾರದ ನಂಟಿನ ಕುರಿತು ಹಲವು ಪ್ರಶ್ನೆ ಕೇಳಿದೆ. ಇತ್ತೀಚಿನ ಹಲವು ವಂಚಕರಿಗೂ ಗುಜರಾತ್‌ಗೂ ನಂಟು ಇರುವುದೇಕೆ? ಇದು ಗುಜರಾತ್ ಮಾಡೆಲ್ ಪ್ರಭಾವವೇ ಎಂದು ಪ್ರಶ್ನಿಸಿದೆ.
ಸ್ಯಾಂಟ್ರೋ ರವಿಯ ವಿರುದ್ಧ ವರ್ಗಾವಣೆ ದಂಧೆಯ ವಿಚಾರವಾಗಿ ಸರ್ಕಾರ ಇನ್ನೂ ಯಾವುದೇ ಪ್ರಕರಣ ದಾಖಲಿಸಲಿಲ್ಲ. ಸ್ಯಾಂಟ್ರೋ ರವಿ ಬಂಧನವಾಗಿದ್ದು, 2ನೇ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಆಗಿದೆ. ಇದು ಸರ್ಕಾರದ ದೂರಿನ ಅಡಿಯಲ್ಲಿ ಆಗಿರುವ ಬಂಧನವಾಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸ್ಯಾಂಟ್ರೋ ರವಿಯ ಎಲ್ಲಾ ವ್ಯವಹಾರ, ಸರ್ಕಾರದ ನಾಟಕ, ಸಚಿವರ ಸಹಭಾಗಿತ್ವವನ್ನು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ಬಹಿರಂಗವಾಗಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಗೃಹ ಸಚಿವ ಅರಗಜ್ಞಾನೇಂದ್ರ ಗುಜರಾತ್‌ನ ಅಹಮ್ಮದಾಬಾದ್‌ಗೆ ತೆರಳಿದ್ದರು. ಇಂದು ಅಲ್ಲೇ ಸ್ಯಾಂಟ್ರೋ ರವಿಯ ಬಂಧನವಾಗಿದೆ. ಇದು ಖಂಡಿತಾ ಕಾಕತಾಳೀಯವಲ್ಲ.ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೆ? ಎಂದು ಕಾಂಗ್ರೆಸ್ ಪ್ರಶ್ನಿಸಿಸಿದೆ.
11 ದಿನಗಳ ಬಳಿಕ ಸ್ಯಾಂಟ್ರೋ ರವಿ ಅರೆಸ್ಟ್, ಗುಜರಾತ್‌ನಲ್ಲಿ ಬಂಧಿಸಿದ ಮೈಸೂರು ಪೊಲೀಸ್!
ಅರಗ ಜ್ಞಾನೇಂದ್ರಗೆ ಕಾಂಗ್ರೆಸ್ ಕೆಲ ಪ್ರಶ್ನೆಗಳನ್ನು ಕೇಳಿದೆ. ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮದ್ಯೆ ನಡೆದ ಡೀಲಿಂಗ್ ಏನು?ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ?ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ?ಅಥವಾ ಹೈಕಮಾಂಡ್‌ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ? ಎಂದು ಕಾಂಗ್ರೆಸ್ ಪ್ರಶ್ನಿಸಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.