15ರಲ್ಲಿ ಕನಿಷ್ಠ 12 ಸ್ಥಾನ ಗೆಲ್ಲಲು ರೆಡಿಯಾಯ್ತು ಸಿದ್ದು ಮಾಸ್ಟರ್ ಪ್ಲಾನ್‌!

Published : Oct 13, 2019, 08:34 AM ISTUpdated : Oct 13, 2019, 09:10 AM IST
15ರಲ್ಲಿ ಕನಿಷ್ಠ 12 ಸ್ಥಾನ ಗೆಲ್ಲಲು ರೆಡಿಯಾಯ್ತು ಸಿದ್ದು ಮಾಸ್ಟರ್ ಪ್ಲಾನ್‌!

ಸಾರಾಂಶ

15ರಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಲು ಸಿದ್ದರಾಮಯ್ಯ ಪ್ಲಾನ್‌| ಅನೌಪಚಾರಿಕ ಸಭೆ ನಡೆಸಿ ಶಾಸಕಕರಿಗೆ ಸೂಚನೆ| ಅನರ್ಹರಿಗೆ ಪಾಠ ಕಲಿಸೋಣ: ಮಾಜಿ ಸಿಎಂ

ಬೆಂಗಳೂರು[ಅ.13]: ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ತಕ್ಕ ಶಾಸ್ತಿ ಮಾಡಲು 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಬೇಕು. ಇದಕ್ಕಾಗಿ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದಾರೆ.

ವಿಧಾನಮಂಡಲ ಅಧಿವೇಶನದ ನಡುವೆಯೇ ವಿಧಾನಸೌಧದಲ್ಲಿ ಉಪ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ತಮ್ಮ ಪಕ್ಷದ ಶಾಸಕರೊಂದಿಗೆ ಅವರು ಶನಿವಾರ ಅನೌಪಚಾರಿಕ ಸಭೆ ನಡೆಸಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಚ್‌.ಕೆ.ಪಾಟೀಲ್‌, ಈಶ್ವರ್‌ ಖಂಡ್ರೆ, ಲಕ್ಷ್ಮೇ ಹೆಬ್ಬಾಳ್ಕರ್‌ ಸೇರಿದಂತೆ ಹಲವು ಶಾಸಕರು ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ ಸೇರಿದಂತೆ ಮೇಲ್ಮನೆಯ ವಿವಿಧ ಕಾಂಗ್ರೆಸ್‌ ಸದಸ್ಯರು ಹಾಗೂ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕ ಆರ್‌.ವಿ.ದೇವರಾಜ್‌, ವಿ.ಆರ್‌ ಸುದರ್ಶನ್‌ ಸೇರಿದಂತೆ ಪಕ್ಷದ ಹಲವು ನಾಯಕರು ಭಾಗವಹಿಸಿದ್ದರು.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುವುದೇ ಡೌಟು!

ಸಭೆಯಲ್ಲಿ ಶಾಸಕರನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ, ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಟ್ಟು 17 ಜನ ಅನರ್ಹ ಶಾಸಕರು ಕಾರಣ. ಆ ಪೈಕಿ ಡಿ.5ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ 15 ಕ್ಷೇತ್ರಗಳ ಪೈಕಿ ಕನಿಷ್ಠ 12ರಲ್ಲಿ ಕಾಂಗ್ರೆಸ್‌ ಗೆಲ್ಲಲೇಬೇಕು. ಪಕ್ಷಕ್ಕೆ ದ್ರೋಹ ಮಾಡಿ ಹೋದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಗೆಲುವೊಂದೆನ್ನೇ ಮಾನದಂಡವಾಗಿಟ್ಟುಕೊಂಡು ಚುನಾವಣೆಗೆ ಇನ್ನೊಂದು ವಾರ ಇರುವುದರೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಯಾರೇ ಅಭ್ಯರ್ಥಿಗಳಾಗಲಿ. ಪಕ್ಷದ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಯಾವುದೇ ಸಣ್ಣಪುಟ್ಟಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಪಕ್ಷದ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ ಜೆಡಿಎಸ್‌ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ. ಪಕ್ಷದಲ್ಲಿ-ಸರ್ಕಾರದ ಮಟ್ಟದಲ್ಲಿ ಅಲ್ಲಿನ ನಾಯಕರ ಮಧ್ಯೆ ಕಚ್ಚಾಟಗಳಿವೆ. ಅವರು ಚುನಾವಣೆಗೂ ಇನ್ನೂ ತಯಾರಿ ನಡೆಸಿಲ್ಲ. ಈ ಸರ್ಕಾರ ಹೆಚ್ಚು ಕಾಲ ಇರುವುದೂ ಅನುಮಾನ. ಹಾಗಾಗಿ ನಾವು ಉಪಚುನಾವಣೆಯ ಸಿದ್ಧತೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆ ಕ್ಷೇತ್ರಗಳ ವೀಕ್ಷಕರನ್ನು ಕರೆದು ಚರ್ಚಿಸುತ್ತೇವೆ. ಜತೆಗೆ ಸ್ಥಳೀಯ ಮುಖಂಡರು, ನಾಯಕರ ಸಲಹೆಗಳನ್ನೂ ಪಡೆದು ಗೆಲ್ಲುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಣಕ್ಕಿಳಿಸಲಾಗುವುದು. ಎಲ್ಲರೂ ಒಟ್ಟಾಗಿ ಶ್ರಮ ವಿನಿಯೋಗಿಸಿದರೆ ಕನಿಷ್ಠ 12 ಕ್ಷೇತ್ರಗಳನ್ನು ಗೆಲ್ಲಬಹುದು. ಆದರೆ, ನಮ್ಮ ಪ್ರಯತ್ನ 15 ಕ್ಷೇತ್ರಗಳಲ್ಲೂ ಗೆಲ್ಲುವ ನಿಟ್ಟಿನಲ್ಲಿ ಇರಲಿ. ಹೆಚ್ಚು ಸ್ಥಾನದಲ್ಲಿ ಗೆದ್ದರೆ ಮತ್ತೆ ನಾವು ಅಧಿಕಾರಕ್ಕೆ ಬರಲು ಅವಕಾಶ ಸಿಗಬಹುದು ಎಂದು ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಮಾಸ್ಟರ್ ಪ್ಲಾನ್ : ನಾಯಕರ ಹೊಸ ತಂತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ